ಮೂಡುಬಿದಿರೆ : 'ಶ್ರೀ ಕೃಷ್ಣ, ಶ್ರೀ ರಾಮ,ಯೇಸು ಕ್ರಿಸ್ತ ,ಮುಹಮ್ಮದ್ ಪೈಗಂಬರ್ ಅವರಂತಹ ಮಹಾಪುರುಷರು,ದಾರ್ಶನಿಕರು ಜಗತ್ತಿಗೆ ಅರ್ಥಪೂರ್ಣ ಬದುಕಿನ ದಾರಿ ತೋರಿದವರು, ಅಂತವರ ಸಂದೇಶಗಳನ್ನು ತಿಳಿಯುವ ಅಗತ್ಯ ಇಂದಿನ ಕಾಲದಲ್ಲಿ ಪ್ರಸ್ತುತವಾಗಿದೆ ಎಂದು ಮಂಗಳೂರಿನ ಶಾಂತಿ ಪ್ರಕಾಶನದ ವ್ಯವಸ್ಥಾಪಕರಾದ ಮುಹಮ್ಮದ್ ಕುಞ್ಞಿ ಹೇಳಿದರು.
ಅವರು ಮೂಡುಬಿದಿರೆಯ ಸೀರತ್ ಸಮಿತಿಯು ಕನ್ನಡ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡ ಪ್ರವಾದಿ ಮುಹಮ್ಮದ್ (ಸ.ಅ) ಅವರ ಜೀವನ ಮತ್ತು ಸಂದೇಶದ ಸಾರ್ವಜನಿಕ ಸಮಾವೇಶ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರವಾದಿ ಮುಹಮ್ಮದ್ ಅವರ ಜೀವನ ತೆರೆದ ಪುಸ್ತಕದಂತೆ. ಅವರ ಜೀವನ ಚರಿತ್ರೆಯಲ್ಲಿ ಎಲ್ಲೂ ಕಪ್ಪುಚುಕ್ಕೆ ಕಾಣಲು ಸಾಧ್ಯವಿಲ್ಲ, ಜನರು ಹೇಗೆ ಬದುಕಬೇಕು,ಅದರಲ್ಲೂ ಹೇಗೆ ಅರ್ಥಪೂರ್ಣವಾಗಿ ಬದುಕಬೇಕೆಂದು ಅವರು ತೋರಿಸಿಕೊಟ್ಟವರು ಎಂದರು.
ಆಳ್ವಾಸ್ ಎಜುಕೇಶನ್ ಫೌಂಡೇಶನ್ ನ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಕರುಣೆ,ಕ್ಷಮೆಯ ಜೊತೆಗೆ ಜಗತ್ತಿನ ಎಲ್ಲಾ ಜನರೂ ಸಮಾನರು ಎಂದು ಈ ಜಗತ್ತಿಗೆ ಹೇಳಿಕೊಟ್ಟವರು ವಿಶ್ವ ಪ್ರವಾದಿ ಮುಹಮ್ಮದ್ ಪೈಗಂಬರರು. ಅವರ ಜೀವನ, ಆದರ್ಶಗಳನ್ನು ಮೈಗೂಡಿಸಿಕೊಂಡು ಹೋಗುವ ಅಗತ್ಯವಿದೆ, ಎಲ್ಲರೂ ಅವರವರ ಧರ್ಮಗಳನ್ನು ಅರ್ಥಮಾಡಿಕೊಂಡರೆ ಸೌಹಾರ್ದತೆ ಉಳಿಯುತ್ತದೆ.
ರಾಮಾಯಣ ಮತ್ತು ಮಹಾಭಾರತ ನಮ್ಮ ದೇಶದ ಎರಡು ಮಹಾಕಾವ್ಯಗಳು. ಇದರ ಬಗ್ಗೆ ತಿಳಿದುಕೊಂಡರೆ ಯಾವುದೂ ತಪ್ಪಿಲ್ಲ. ಇದರಲ್ಲಿರುವ ವಿಚಾರಗಳನ್ನು ತಿಳಿದುಕೊಂಡು ನಾವು ನಮ್ಮ ಇಂದಿನ ಜೀವನಕ್ಕೆ ಅಳಪಡಿಸಿಕೊಳ್ಳಬೇಕು ಎಂದ ಅವರು ನಾವು ದಾನ ಮತ್ತು ಉತ್ತಮ ಕೆಲಸಗಳನ್ನು ಮಾಡುವಾಗ ದೇವರಿಗೊಂದು ಸಮಪ೯ಣೆ ಮಾಡಿದರೆ ನಮ್ಮ ಧಮ೯ಗಳೂ ಉಳಿಯುತ್ತವೆ ದೇಶವೂ ಬೆಳೆಯುತ್ತದೆ ಎಂದರು.
ಜೈನ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ|ಪ್ರಭಾತ್ ಬಲ್ನಾಡ್ ಅವರು ಮಾತನಾಡಿ ' 1500 ವರ್ಷಗಳ ಹಿಂದೆ ಏನೂ ಶಿಕ್ಷಣ ಇಲ್ಲದ, ಬಡತನದ ಹಿನ್ನೆಲೆಯ ,ಯಾವ ಬ್ಯಾಕ್ ರೌಂಡೂ ಇಲ್ಲದೆ ಕೇವಲ 63 ವರ್ಷಗಳ ಕಾಲ ಬದುಕಿದ್ದ ಪ್ರವಾದಿಯವರ ಪ್ರಭಾವ ಇಂದಿಗೂ ಜಗತ್ತಿನಾದ್ಯಂತ ಇದೆಯೆಂದಾದರೆ ಅವರು ಮಾಡಿದ ಬದಲಾವಣೆ,ದುಧಾರಣೆ ಮತ್ತು ಸರಳ ಹಾಗೂ ಆದರ್ಶ ಜೀವನವೇ ಕಾರಣ' ವೆಂದು ಹೇಳಿದರು.
ಮಣಿಪಾಲ್ ಎಮ್.ಐ.ಟಿ.ಯ ಅಸಿಸ್ಟೆಂಟ್ ಪ್ರೊಫೆಸರ್ ಡಾ|ಜಮಾಲುದ್ದೀನ್ ಹಿಂದಿ, ಸಂಪಿಗೆ ಚರ್ಚ್ ನ ಧರ್ಮಗುರುಗಳಾದ ರೆ.ಫಾ.ವಿನ್ಸೆಂಟ್ ಡಿಸೋಜ ಅವರು ಪ್ರವಾದಿಯವರ, ದಾರ್ಶನಿಕರ ಜೀವನ ಚರಿತ್ರೆಯ ಕುರಿತು, ಸೌಹಾರ್ದ ಬದುಕಿನ ಕುರಿತು ಮಾತನಾಡಿದರು.
ಅಹ್ಮದ್ ತಾಝಾ ಅವರ ಕಿರಾಅತ್ ನೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಮೆಹಫೂಝ್ ಅವರು ಸ್ತುತಿಗೀತೆ ಹಾಡಿದರು.
ಸೀರತ್ ಕಮಿಟಿಯ ಉಪಾಧ್ಯಕ್ಷ ಅಬ್ದುಸ್ಸಲಾಮ್ ಬೂಟ್ ಬಝಾರ್ ಅವರು ಸ್ವಾಗತಿಸಿದರು. ಮುನೀರ್ ಪದ್ರೆಂಗಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಶೇಖ್ ನೂರುದ್ದೀನ್ ವಂದಿಸಿದರು.
ಸೀರತ್ ಕಮಿಟಿಯ ಹಮೀದ್ ರಾಯಲ್, ಝಮೀರ್ ಫರ್ಹಾನ್,ಇರ್ಷಾದ್ ಎನ್‌ಜಿ, ಮುಹಮ್ಮದ್ ಆರಿಫ್,ನದೀಮ್, ಶಹಾಮ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

0 Comments