ಸಹೋದರಿಯೊಂದಿಗೆ ವೀಡಿಯೋ ಕಾಲ್ ನಲ್ಲಿ ಮಾತನಾಡುತ್ತಲೇ ನೇಣಿಗೆ ಶರಣಾದ ಯುವಕ



ಮೂಡುಬಿದಿರೆ : ತಾಲೂಕಿನ ಬೆಳುವಾಯಿ ಗ್ರಾಮ ಪಂಚಾಯತ್ ಪ್ಯಾಪ್ತಿಯ ನಾಣಿಲ್ ಎಂಬಲ್ಲಿ ಯುವಕನೋವ೯ ತನ್ನ ಅಕ್ಕನಿಗೆ ವೀಡಿಯೋ ಕಾಲ್ ಮೂಲಕ ಮಾತನಾಡುತ್ತಲೇ ಆತ್ಮಹತ್ಯೆಗೆ ಶರಣಾದ ಘಟನೆ ಶುಕ್ರವಾರ ಮುಂಜಾನೆ ನಡೆದಿದೆ. 


ಬೆಳ್ತಂಗಡಿ ತಾಲೂಕಿನ ಕಾಜೂರು ಮೂಲದ ಅಬುಸಾಲಿ ಇಸ್ಮಾಯಿಲ್ ಎಂಬವರ ಪುತ್ರ 

ಸಯ್ಯದ್ ಅನ್ವರ್ (25 ವ) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. 


 ಬೆಳುವಾಯಿಯಲ್ಲಿ ಕಳೆದ ಕೆಲವು ಸಮಯದಿಂದ ಇಸ್ಮಾಯಿಲ್ ಎಂಬವರ ಬಾಡಿಗೆ ಮನೆಯಲ್ಲಿ ಪತ್ನಿ ಮಗುವಿನೊಂದಿಗೆ ವಾಸವಾಗಿದ್ದು ಪತಿ, ಪತ್ನಿ ನಡುವೆ ಆಗಾಗ ಜಗಳವಾಗುತ್ತಿತ್ತೆನ್ನಲಾಗಿದೆ ಈ ಸಂಬಂಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು. 


ಮೀನಿನ ಟೆಂಪೋದಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಅನ್ವರ್ ಕಳೆದ ಕೆಲವು ಸಮಯದಿಂದ ಕೆಲಸವಿಲ್ಲದೆ ಮನೆಯಲ್ಲಿದ್ದು ಒಂದೆರಡು ದಿನಗಳ ಹಿಂದೆ ಬೆಂಗಳೂರಿಗೆ ಹೋಗಿ ಬಂದಿದ್ದಾರೆನ್ನಲಾಗಿದೆ. ಗುರುವಾರ ಮತ್ತೆ ಪತಿ-ಪತ್ನಿ ನಡುವೆ ಜಗಳವಾಗಿದ್ದು ಪತ್ನಿ ತನ್ನ ಎರಡು ವಷ೯ದ ಪುತ್ರನೊಂದಿಗೆ ತವರು ಮನೆಗೆ ತೆರಳಿದ್ದರು. 

 ಈ ಹಿನ್ನೆಲೆಯಲ್ಲಿ ತನ್ನಕ್ಕನಿಗೆ ವಿಡಿಯೋ ಕರೆ ಮಾಡಿ ಪತ್ನಿ ಮನೆಯವರ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾರೆನ್ನಲಾಗಿದೆ. ಆತಂಕಕ್ಕೊಳಗಾದ ಮನೆಯವರು ಬಾಡಿಗೆ ಮನೆ ಬಳಿ ಬಂದಾಗ ಆಗಲೇ ಆತ್ಮಹತ್ಯೆ ಮಾಡಿಕೊಂಡಿರುವುದು ಗಮನಕ್ಕೆ ಬಂದಿದೆ. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.