ಮೂಡುಬಿದಿರೆ: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಹೊರತಾಗಿ ರಾಜ್ಯದ ಇತರ ಭಾಗಗಳಲ್ಲಿ ಕಂಬಳ ನಡೆಸಬಾರದು ಎಂದು ಕೋರಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ತಳ್ಳಿಹಾಕಿದೆ.
ಈ ಅರ್ಜಿಯನ್ನು ಪ್ರಾಣಿ ಹಕ್ಕುಗಳ ಸಂಘಟನೆ ಪೀಪಲ್ ಫಾರ್ ದ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (ಪೇಟಾ) ಇಂಡಿಯಾ ಸಲ್ಲಿಸಿತ್ತು. ಕರ್ನಾಟಕ ಹೈಕೋರ್ಟ್ ಈ ಹಿಂದೆ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಲಾಗಿತ್ತು.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠ ಅರ್ಜಿಯನ್ನು ವಿಚಾರಣೆ ನಡೆಸಿ ವಜಾಗೊಳಿಸಿತು. ವಿಚಾರಣೆ ವೇಳೆ ನ್ಯಾಯಮೂರ್ತಿ ಸಂದೀಪ್ ಮೆಹ್ತಾ, “ರಾಜ್ಯದ ಇತರ ಭಾಗಗಳಲ್ಲಿ ಈ ಸಂಸ್ಕೃತಿಯನ್ನು ಪ್ರದರ್ಶಿಸಲು ಬಯಸಿದರೆ ಅದರಲ್ಲಿ ತಪ್ಪೇನಿದೆ? ರಾಜ್ಯದ ಬೇರೆ ಭಾಗದ ಜನರೂ ಈ ಕ್ರೀಡೆ ಹಾಗೂ ಸಂಸ್ಕೃತಿಯನ್ನು ಪರಿಚಯಿಸಿಕೊಳ್ಳಲಿ. ಅದನ್ನು ಏಕೆ ಒಂದು ಪ್ರದೇಶಕ್ಕೆ ಮಾತ್ರ ಸೀಮಿತಗೊಳಿಸಬೇಕು?” ಎಂದು ಪ್ರಶ್ನಿಸಿದರು.
ಪೇಟಾ ಪರ ವಕೀಲರು, “ಕಂಬಳವು ಮೂಲತಃ ಕರ್ನಾಟಕದ ಕರಾವಳಿ ಭಾಗದ ಎರಡು ಜಿಲ್ಲೆಗಳ ಸಂಪ್ರದಾಯ. ಬೆಂಗಳೂರಿನಲ್ಲಿ ಈ ಕ್ರೀಡೆಗೆ ಸಂಸ್ಕೃತಿ ಸಂಬಂಧವಿಲ್ಲ” ಎಂದು ವಾದಿಸಿದ್ದರು. ಆದರೆ ಈ ವಾದವನ್ನು ನ್ಯಾಯಾಲಯ ತಳ್ಳಿಹಾಕಿತು. ಇದೇ ವೇಳೆ, “ಮುಂದಿನ ದಿನಗಳಲ್ಲಿ ಪೇಟಾ ಸಂಘಟನೆಗೂ ಕೆಲವು ಪ್ರಶ್ನೆಗಳನ್ನು ಕೇಳಬೇಕಾಗಬಹುದು” ಎಂದು ಪೀಠ ಅಭಿಪ್ರಾಯ ವ್ಯಕ್ತಪಡಿಸಿತು.
ಕರ್ನಾಟಕ ಹೈಕೋರ್ಟ್ ನವೆಂಬರ್ 14ರಂದು ನೀಡಿದ್ದ ಆದೇಶದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಹೊರತಾಗಿ ಇತರ ಪ್ರದೇಶಗಳಲ್ಲಿ ಕಂಬಳ ನಡೆಸಲು ರಾಜ್ಯ ಸರ್ಕಾರ ನೀಡುವ ಅಧಿಸೂಚನೆಯನ್ನು ತಡೆಯುವ ಮನವಿಯನ್ನು ಈಗಾಗಲೇ ತಿರಸ್ಕರಿಸಿತ್ತು.
---
ಹಿಂದಿನ ತೀರ್ಪು
2023ರ ಮೇ ತಿಂಗಳಲ್ಲಿ ಸುಪ್ರೀಂ ಕೋರ್ಟ್‌ನ ಐದು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ಜಲ್ಲಿಕಟ್ಟು, ಎತ್ತುಬಂಡಿ ಓಟ ಹಾಗೂ ಕಂಬಳ ಸೇರಿದಂತೆ ಸಾಂಪ್ರದಾಯಿಕ ಕ್ರೀಡೆಗಳಿಗೆ ಅನುಮತಿ ನೀಡುವ ರಾಜ್ಯಗಳ ತಿದ್ದುಪಡಿ ಕಾನೂನುಗಳನ್ನು ಮಾನ್ಯವೆಂದು ಘೋಷಿಸಿತ್ತು.
ಸುಪ್ರೀಂ ಕೋರ್ಟ್‌ನ ಈ ತೀರ್ಪಿನಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ಕಂಬಳ ಆಯೋಜನೆಗೆ ಇದ್ದ ಅಡ್ಡಿಗಳು ದೂರವಾದಂತಾಗಿದೆ. ತುಳುನಾಡಿನ ಹೆಮ್ಮೆಯ ಸಂಪ್ರದಾಯವನ್ನು ರಾಜ್ಯದ ಇತರ ಭಾಗಗಳಿಗೂ ಪರಿಚಯಿಸಲು ಇದು ನೆರವಾಗಲಿದೆ ಎಂದು ಕಂಬಳಾಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.


0 Comments