ಮೂಡುಬಿದಿರೆ :
ಬಸ್ ಮಾಲಕರು ಪ್ರಯಾಣಿಕರ ಅನುಕೂಲಕ್ಕಾಗಿ ಆಧುನಿಕ ತಂತ್ರಜ್ಞಾನ ಆಧಾರಿತ ಟಿಕೆಟ್ ದರ ಪಾವತಿ ವ್ಯವಸ್ಥೆಯನ್ನು ಪರಿಚಯಿಸಲು ಮುಂದಾಗಿದ್ದು ಚಲೋ ಸಂಸ್ಥೆಯ ಸಹಯೋಗದೊಂದಿಗೆ ಚಲೋ ಯುಪಿಐ ಮೂಲಕ ಬಸ್ ಟಿಕೆಟ್ ದರ ಪಾವತಿಸುವ ಹೊಸ ಡಿಜಿಟಲ್ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಳ್ಳಾಲ್ ತಿಳಿಸಿದ್ದಾರೆ.
ಅವರು ಮಂಗಳವಾರ ನಿಶ್ಮಿತ ಟವರ್ಸ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮೂಡುಬಿದಿರೆ ವಲಯ ಬಸ್ ಮಾಲಕರ ಸಂಘದ ಅಧ್ಯಕ್ಷ ನಾರಾಯಣ ಪಿ.ಎಂ., ಕಾರ್ಯದರ್ಶಿ ಪ್ರಕಾಶ್ ಸಫಲಿಗ, ಕೋಶಾಧಿಕಾರಿ ಶಶಿ ಅಮೀನ್ ಹಾಗೂ ಇತರ ಬಸ್ ಮಾಲಕರ ಉಪಸ್ಥಿತಿಯಲ್ಲಿ ವ್ಯವಸ್ಥೆಗೆ ಚಾಲನೆ ನೀಡಿದರು.
ಚಲೋ ಸಿಟಿ ಮ್ಯಾನೇಜರ್ ಆದಿತ್ಯ ಮಾಹಿತಿ ನೀಡಿ, ಪ್ರಯಾಣಿಕರು ಬಸ್‌ನಲ್ಲಿರುವ ಚಲೋ ಮಷೀನ್‌ನಲ್ಲಿನ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ ತಾವು ಪ್ರಯಾಣಿಸುವ ಸ್ಥಳವನ್ನು ನಮೂದಿಸಿದರೆ, ಪರದೆಯ ಮೇಲೆ ತೋರಿಸುವ ಮೊತ್ತವನ್ನು ಯುಪಿಐ ಮೂಲಕ ಪಾವತಿಸಬಹುದು. ಪಾವತಿ ಪೂರ್ಣಗೊಂಡ ಕೂಡಲೇ ಟಿಕೆಟ್ ದರ ಡಿಜಿಟಲ್ ರೂಪದಲ್ಲಿ ದಾಖಲಾಗುತ್ತದೆ. ಹುಬ್ಬಳ್ಳಿ ಹಾಗೂ ಶಿವಮೊಗ್ಗದಲ್ಲಿ ಈಗಾಗಲೇ ಯಶಸ್ವಿಯಾಗಿ ಅನುಷ್ಠಾನಗೊಂಡಿರುವ ಈ ವ್ಯವಸ್ಥೆಯನ್ನು ಇದೀಗ ಮೂಡುಬಿದಿರೆಯಲ್ಲೂ ಜಾರಿಗೊಳಿಸಲಾಗುತ್ತಿದೆ ಎಂದು ಆದಿತ್ಯ ತಿಳಿಸಿದರು. ಈ ಹೊಸ ಕ್ರಮದಿಂದ ನಗದುರಹಿತ ವ್ಯವಹಾರಕ್ಕೆ ಉತ್ತೇಜನ ದೊರೆಯಲಿದ್ದು, ಪ್ರಯಾಣಿಕರಿಗೆ ಸುಗಮ ಹಾಗೂ ಪಾರದರ್ಶಕ ಸೇವೆ ಲಭಿಸಲಿದೆ ಎಂದು ಬಸ್ ಮಾಲಕರು ಅಭಿಪ್ರಾಯ ವ್ಯಕ್ತಪಡಿಸಿದರು.


0 Comments