ಅಕ್ರಮ ಕೆಂಪು ಕಲ್ಲಿನ ಕೋರೆಗಳಿಗೆ ಅಧಿಕಾರಿಗಳ ಕೃಪಾಕಟಾಕ್ಷ *ಪುತ್ತಿಗೆ ಗ್ರಾಮಸಭೆಯಲ್ಲಿ ಗ್ರಾಮಸ್ಥರ ಆರೋಪ

ಜಾಹೀರಾತು/Advertisment
ಜಾಹೀರಾತು/Advertisment

 ಅಕ್ರಮ ಕೆಂಪು ಕಲ್ಲಿನ ಕೋರೆಗಳಿಗೆ ಅಧಿಕಾರಿಗಳ ಕೃಪಾಕಟಾಕ್ಷ 

*ಪುತ್ತಿಗೆ ಗ್ರಾಮಸಭೆಯಲ್ಲಿ ಗ್ರಾಮಸ್ಥರ ಆರೋಪ

ಮೂಡುಬಿದಿರೆ :  ಪುತ್ತಿಗೆ ಗ್ರಾ. ಪಂ.ವ್ಯಾಪ್ತಿಯಲ್ಲಿ ಅಕ್ರಮವಾಗಿ ನಡೆಯುತ್ತಿರುವ ಕೆಂಪು ಕಲ್ಲಿನ ಕೋರೆಗಳಿಗೆ ಸಂಬಂಧಪಟ್ಟ ಇಲಾಖೆಯ ಅಧಿಕಾಗಳ ಕೃಪಾಕಟಾಕ್ಷ ಇರುವುದರಿಂದಲೇ ಕ್ರಮಕೈಗೊಳ್ಳುತ್ತಿಲ್ಲವೆಂದು ಗ್ರಾಮಸ್ಥರು  ಆರೋಪಿಸಿದ್ದಾರೆ. 


ಬುಧವಾರದಂದು ಪಂಚಾಯತ್ ನ ಉಪಾಧ್ಯಕ್ಷ ದಯಾನಂದ್ ಅಧ್ಯಕ್ಷತೆಯಲ್ಲಿ  ನಡೆದ 2025-26ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆಯಲ್ಲಿ ಮಾತನಾಡಿದ ಗ್ರಾಮಸ್ಥರು ಇಲ್ಲಿ ನಡೆಯುತ್ತಿರುವ ಅಕ್ರಮ ಕೋರೆಗಳಿಂದ ಸ್ಥಳೀಯರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ಬಂದಿದ್ದರೂ ಕ್ರಮಕೈಗೊಳ್ಳುತ್ತಿಲ್ಲ. ಇದರಿದಾಗಿ ಸರ್ಕಾರದ ಬೊಕ್ಕಸಕ್ಕೂ ನಷ್ಟವಾಗುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.  

ಗ್ರಾಮಸ್ಥ ರಾಜೇಶ್ ಕಡಲಕೆರೆ ಕ್ವಾರಿ ವಿಷಯ ಪ್ರಸ್ತಾಪಿಸಿ, ಕಳೆದ ಒಂದೂವರೆ ವರ್ಷಗಳಿಂದ ಗ್ರಾಮಸಭೆಯಲ್ಲಿ ಅಕ್ರಮ ಕೋರೆಗಳ ಬಗ್ಗೆ ಮಾಹಿತಿ, ಅವುಗಳ ಬಗ್ಗೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಕೇಳುತ್ತಿದ್ದರೂ ಯಾವುದೇ ಮಾಹಿತಿ ಲಭ್ಯವಾಗುತ್ತಿಲ್ಲ. ಎಲ್ಲಿಂದಲೂ ಬಂದು ಇಲ್ಲಿ ಅಕ್ರಮವಾಗಿ ಕ್ವಾರಿಗಳನ್ನು ಮಾಡುತ್ತಿರುವ ಮಾಫಿಯ ಸ್ಪಷ್ಟವಾಗಿ ಗೋಚರವಾಗುತ್ತಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಅಧಿಕಾರಿಗಳು ಅವರೊಂದಿಗೆ ಶಾಮೀಲಾಗಿದ್ದಾರೆಯೇ ಎಂಬ ಸಂಶಯ ಕಾಡುತ್ತಿದೆ ಎಂದು ಹೇಳಿದರು. 

ಪಂಚಾಯತ್ ವ್ಯಾಪ್ತಿಯಲ್ಲಿರುವ ಆರು ಕೋರೆಗಳ ಬಗ್ಗೆ ವರದಿಯನ್ನು ಮೇಲಾಧಿಕಾರಿಗಳಿಗೆ ನೀಡಲಾಗಿದೆ ಎಂದು ಗ್ರಾಮ ಆಡಳಿತಾಧಿಕಾರಿ ಗಾಯತ್ರಿ ಬಿ. ತಿಳಿಸಿದರು. ಅವುಗಳ ಮೇಲೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಳಿದಾಗ ಅಧಿಕಾರಿ ಉತ್ತರ ನೀಡುವುದಕ್ಕೆ ತಡವರಿಸಿದಾಗ, ಗ್ರಾಮಸ್ಥರು ಗ್ರಾಮಸಭೆಗಳಿಗೆ ತಹಸೀಲ್ದಾರ್ ಅಥವಾ ಕಂದಾಯ ನಿರೀಕ್ಷಕರು ಬರುವಂತಾಗಬೇಕು ಎಂದು ಆಗ್ರಹಿಸಿದರು. 

ಹಳೇ ವಿದ್ಯುತ್ ಕಂಬಗಳನ್ನು ತೆರವುಗೊಳಿಸುವ ವೇಳೆ ಗುತ್ತಿಗೆದಾರರು ಅದರಲ್ಲಿ ಸುಸ್ಥಿತಿಯಲ್ಲಿರುವ ಬೀದಿ ದೀಪಗಳನ್ನು ಕೂಡ ತೆರವುಗೊಳಿಸುತ್ತಿದ್ದಾರೆ ಹೊಸ ಕಂಬಗಳನ್ನು ಅಳವಡಿಸುವಾಗ ಆ ಬೀದಿ ದೀಪಗಳನ್ನು ಹಾಕುವುದಿಲ್ಲ. ಹಂಡೇಲುಸುತ್ತು, ಹಂಡೇಲು ಶಾಲೆ, ಮಜ್ಜಿಗುರಿ ಸ್ಮಶಾನ ರಸ್ತೆಗಳು ಸಹಿತ ಪಂಚಾಯಿತಿ ವ್ಯಾಪ್ತಿಯ ವಿವಿಧ ಕಡೆ ಇದೇ ಸಮಸ್ಯೆ ಇದೆ ಎಂದು ಸದಸ್ಯ ಮುರಳೀಧರ ಕೋಟ್ಯಾನ್ ಹೇಳಿದರು. ಈ ಕುರಿತು ಪರಿಶೀಲಿಸುತ್ತೇವೆ ಎಂದು ಮೆಸ್ಕಾಂ ಅಧಿಕಾರಿಗಳು ಹೇಳಿದರು. 

ಸಂಪಿಗೆಯಲ್ಲಿರುವ ರೆಸಾರ್ಟ್, ಅಂಗಡಿ, ಹೋಟೇಲ್ ಪರಿಸರದಲ್ಲಿ ಚರಂಡಿಯಿAದ ತೊಂದರೆಯಾಗುತ್ತಿದೆ. ಕೊಳಚೆ ನೀರಿನಿಂದ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಂಭವವಿದೆ ಎಂದು ಗ್ರಾಮಸ್ಥ ರೋಶನ್ ಹೇಳಿದರು. ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಪಿಡಿಒ ಬೀಮಾ ನಾಯಕ ಬಿ.ಹೇಳಿದರು. 


ಪುತ್ತಿಗೆ ಗ್ರಾಪಂ ಮಂಜೂರಾದ ಅಂಗನವಾಡಿ, ಜಾಗದ ಅಭಾವದಿಂದ ಗಡಿ ಭಾಗದಲ್ಲಿರುವ ಮಾರ್ಪಾಡಿ ಗ್ರಾಮದಲ್ಲಿದೆ. ಇಲ್ಲಿ ನೀರಿನ ಸಮಸ್ಯೆ ಕಾಡುತ್ತಿದೆ ಎಂದು ಗ್ರಾಮಸ್ಥ ರಾಜೇಶ್ ಪ್ರಸ್ತಾಪಿಸಿದರು. ಸರ್ಕಾರಿ ಜಾಗವನ್ನು ಗುರುತಿಸಿ ಪುತ್ತಿಗೆ ಗ್ರಾಪಂ ವ್ಯಾಪ್ತಿಯಲ್ಲಿ ಅಂಗನವಾಡಿ ಕಟ್ಟಡವನ್ನು ನಿರ್ಮಿಸಲು ಮನವಿ ನೀಡಿ ಎಂದು ಸಭೆಯ ನೋಡೆಲ್ ಅಧಿಕಾರಿಯಾದ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೈಲಾ ಕೆ.ಕಾರಿಗಿ ಹೇಳಿದರು. ಕುಂಗೂರು ಅಂಗನವಾಡಿ ಕೇಂದ್ರದಲ್ಲೂ ನೀರಿನ ಸಮಸ್ಯೆ ಕಾಡುತ್ತಿದೆ ಎಂದು ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಉಷಾ ಭಂಡಾರಿ ಹೇಳಿದರು. ಮೂಲಭೂತ ಸೌಕರ್ಯಗಳ ಕೊರತೆ ಇದ್ದಲ್ಲಿ ತಕ್ಷಣ ನಮ್ಮ ಗಮನಕ್ಕೆ ತನ್ನಿ ಎಂದು ಶೈಲಾ ಕೆ.ಕಾರಿಗಿ ಹೇಳಿದರು.

Post a Comment

0 Comments