ವಿಶ್ವಾಸಾರ್ಹ ಪತ್ರಿಕೋದ್ಯಮಕ್ಕಾಗಿ ಎಐ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳಬೇಕು
ಮೂಡುಬಿದಿರೆ : ವಿಶ್ವಾಸಾರ್ಹ ಪತ್ರಿಕೋದ್ಯಮಕ್ಕಾಗಿ ಎಐ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳಬೇಕು ಎಂದು ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ಹೇಳಿದರು.
ಅವರು ಮಂಗಳೂರು ಕುದ್ಮಲ್ ರಂಗರಾವ್ ಪುರಭವನದಲ್ಲಿ ಬುಧವಾರ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸುವರ್ಣ ಸಂಭ್ರಮದ ಸಮಾರೋಪದಲ್ಲಿ ‘ಪ್ರಸ್ತುತ ಹಾಗೂ ಭವಿಷ್ಯದ ಮಾಧ್ಯಮ’ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೃತಕ ಬುದ್ಧಿಮತ್ತೆ(ಎಐ) ಭವಿಷ್ಯದ ಪತ್ರಿಕೋದ್ಯಮವಾಗಲಿದ್ದು, ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಪರಿಣಾಮಕಾರಿಯಾಗಿ ರೂಪುಗೊಳ್ಳಲಿದೆ. ಈ ಬೆಳವಣಿಗೆ ‘ಪತ್ರಿಕೋದ್ಯಮ’ವನ್ನು ‘ಮೀಡಿಯಾ ಟೆಕ್’(ಮಾಧ್ಯಮ ತಂತ್ರಜ್ಞಾನ) ಆಗಿ ಬದಲಾಯಿಸಿದೆ. ಈಗ ಯಾರೂ ಪತ್ರಿಕೋದ್ಯಮ ಎಂದು ಕರೆಯುವುದಿಲ್ಲ, ಮೀಡಿಯಾ ಟೆಕ್ ಎನ್ನುತ್ತಾರೆ. ಪತ್ರಿಕೆ ಹಂಚಲು, ಓದಲು ಪರ್ಯಾಯ ಮಾಧ್ಯಮವನ್ನು ಜನತೆ ನೆಚ್ಚಿಕೊಳ್ಳುತ್ತಿದೆ. ಡಿಜಿಟಲ್ ವೇದಿಕೆ ಮೂಲಕ ಸುದ್ದಿ ಸಾಕಷ್ಟು ವೈರಲ್ ಆಗುತ್ತಿರುವ ಈ ಸಂಕ್ರಮಣ ಕಾಲಘಟ್ಟದಲ್ಲಿ ನಾವಿದ್ದೇವೆ. ಹಿಂದೆ ದೊಡ್ಡ ಪತ್ರಿಕೆಗಳಿಗೆ ಸಂದರ್ಶನ ನೀಡುತ್ತಿದ್ದವರು ಈಗ ಸಣ್ಣ ಪಾಡ್‌ಕಾಸ್ಟ್‌ಗಳ ಮೂಲಕ ಪ್ರಪಂಚದ ಗಮನ ಸೆಳೆಯುತ್ತಿದ್ದಾರೆ. ಅಷ್ಟರ ಮಟ್ಟಿಗೆ ಮೀಡಿಯಾ ಟೆಕ್ ಬದಲಾಗುತ್ತಿದೆ ಎಂದರು.
ಮಾಧ್ಯಮ ರಂಗ ಪ್ರಮುಖವಾಗಿ ನಾಲ್ಕು ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದ ರವಿ ಹೆಗಡೆ, ಡಿಜಿಟಲ್ ಮಾಧ್ಯಮ ಕೀಳುಮಟ್ಟ ತಲುಪಿದೆ. ಇನ್ನೊಬ್ಬರನ್ನು ಕೊಲೆ ಮಾಡುವ ಸ್ಥಿತಿಗೆ ಜಾಲತಾಣಗಳಲ್ಲಿ ಕಾಮೆಂಟ್ಸ್‌ಗಳು ಪೋಸ್ಟ್ ಆಗುತ್ತಿವೆ. ಫೇಕ್ ಸುದ್ದಿಗಳು ಹುಡುಕಿಕೊಂಡು ಬರುತ್ತಿದ್ದು, ಆತಂಕಕಾರಿಯಾಗಿ ಪಸರಿಸುತ್ತಿದೆ. ಶೇ.೭೦ರಷ್ಟು ಫೇಕ್ ಸುದ್ದಿಗಳೇ ಆಗಿದ್ದು, ಇದು ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತಿವೆ ಎಂದರು.
ಬೇಜವಾಬ್ದಾರಿಯುತ ಪತ್ರಿಕೋದ್ಯಮ ಕೂಡ ಕಪ್ಪು ಚುಕ್ಕೆ. ಮುದ್ರಣ ಮಾಧ್ಯಮ ನಿರ್ದಿಷ್ಟ ಚೌಕಟ್ಟು, ನೀತಿಸಂಹಿತೆಯಲ್ಲಿ ಕಾರ್ಯನಿರ್ವಹಿಸುತ್ತದೆ. ಸಾಮಾಜಿಕ ಜಾಲತಾಣಗಳು ಯಾವುದೇ ಕಾನೂನು ಚೌಕಟ್ಟು ಇಲ್ಲ ಎಂದರು. ಪೂರ್ವನಿಯೋಜಿತ ಪ್ರಚಾರ(ಪ್ರೊಪಗಾಂಡ) ಪತ್ರಿಕೋದ್ಯಮಕ್ಕೆ ದೊಡ್ಡ ಗಂಡಾಂತರವಾಗಿದೆ. ಸುಳ್ಳು ಸುದಿಯನ್ನು ಹಲವು ಸಲ ಹೇಳಿ ಅದನ್ನೇ ಸತ್ಯ ಎಂದು ಸಮಾಜವನ್ನು ನಂಬಿಸುವ ಭ್ರಮೆ ಆವರಿಸುತ್ತಿದೆ. ಮುಖ್ಯವಾಹಿನಿ ಮಾಧ್ಯಮಗಳಿಗಿಂತ ಸೋಶಿಯಲ್ ಮೀಡಿಯಾಗಳ ಪೂರ್ವಯೋಜಿತ ಪ್ರಚಾರಗಳೇ ಜಾಸ್ತಿಯಾಗುತ್ತಿದ್ದು, ಇದು ಪ್ರಜಾಪ್ರಭುತ್ವಕ್ಕೆ ಆತಂಕಕಾರಿಯಾಗಿದೆ ಎಂದು ರವಿ ಹೆಗಡೆ ಕಳವಳ ವ್ಯಕ್ತಪಡಿಸಿದರು.
ಮೂರು ಮಾಧ್ಯಮಗಳೂ ಪೂರಕ:
ಮುದ್ರಣ ಮಾಧ್ಯಮ, ದೃಶ್ಯ ಮಾಧ್ಯಮ ಹಾಗೂ ಜಾಲತಾಣ ಮಾಧ್ಯಮಗಳು ಜೊತೆ ಜೊತೆಯಾಗಿಯೇ ಸಾಗಬೇಕು. ಅವು ಪರಸ್ಪರ ಕಚ್ಚಾಡುವುದಲ್ಲ, ಅವುಗಳ ಸುದ್ದಿ ಆದ್ಯತೆ ಮತ್ತು ಶೈಲಿ ಬೇರೆ ಬೇರೆಯಾಗಿದ್ದರೂ ಅವುಗಳು ಒಂದಕ್ಕೊಂದು ಪೂರಕ ಎಂದರು.
ಮಾಧ್ಯಮಗಳು ಟಿಆರ್‌ಪಿ ಹಾಗೂ ಆದಾಯಕ್ಕಾಗಿ ಏನೇನೋ ಮಾಡಬೇಕಾಗಿದೆ. ಈ ಬಗ್ಗೆ ಸುದ್ದಿ ಮಾಧ್ಯಮಗಳು ಆತ್ಮವಿಮರ್ಶೆ ಮಾಡಿ ಹೆಜ್ಜೆ ಇಡಬೇಕಾಗಿದೆ. ಸುದ್ದಿ ಮಾಧ್ಯಮಕ್ಕೆ ಮುಖ್ಯವಾಗಿ ಬೇಕಾಗಿದ್ದು ವಿಶ್ವಾಸಾರ್ಹತೆಯೇ ಹೊರತು ಬೇರೇನಲ್ಲ ಎಂದರು.
ಪ್ರಸಕ್ತ ಮಾಹಿತಿ ತಂತ್ರಜ್ಞಾನವು ಇಡೀ ಪತ್ರಿಕೋದ್ಯಮವನ್ನು ಬದಲಾಯಿಸುತ್ತಿದೆ. ಇಂದಿನ ದಿನಗಳಲ್ಲಿ ಕೃತಕಬುದ್ಧಮತ್ತೆ ಬಗ್ಗೆ ಅರಿವು ಹೊಂದಿರದಿದ್ದರೆ ನಾವು ಅನಕ್ಷರಸ್ಥರಾಗಿ ಬಿಡುತ್ತೇವೆ. ಭವಿಷ್ಯದ ಪತ್ರಕರ್ತರಾಗಲು ಎಐ ಬಗ್ಗೆ ತಿಳಿವಳಿಕೆ ಅತೀ ಅಗತ್ಯ. ಕನ್ನಡ ಭಾಷೆಯಲ್ಲಿ ಎಐ ತಂತ್ರಜ್ಞಾನ ಇನ್ನೂ ಬೆಳೆಯಬೇಕಾಗಿದೆ. ಎಐ ತಂತ್ರಜ್ಞಾನ ಹಲವು ಬಗೆಯ ಮಾಹಿತಿಗಳನ್ನು ನೀಡಲಿದೆ ಎಂದು ಹೆಗಡೆ ಹೇಳಿದರು.
ದ.ಕ.ದಲ್ಲಿ ಜಾಗೃತ ಪತ್ರಿಕೋದ್ಯಮ:
ಪತ್ರಿಕೋದ್ಯಮ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಜಾಗೃತವಾಗಿದೆ. ಇಲ್ಲಿ ಪತ್ರಿಕೋದ್ಯಮ ದೊಡ್ಡ ಸವಾಲು ಎದುರಿಸುವ ಸ್ಥಿತಿ ಇದೆ. ಮಾಧ್ಯಮದಲ್ಲಿ ತಪ್ಪು ಉಂಟಾದರೆ ಕೂಡಲೇ ಗಮನಕ್ಕೆ ತರುತ್ತಾರೆ. ಹಾಗಾಗಿ ಇಲ್ಲಿನ ಜನತೆ ಬಹಳ ಜಾಗೃತರು. ಕರ್ತವ್ಯ ಪ್ರಜ್ಞೆ ಮೆರೆಯುತ್ತಿದ್ದು, ರಾಜ್ಯದ ಪತ್ರಿಕೋದ್ಯಮಕ್ಕೆ ಇಲ್ಲಿನ ಕೊಡುಗೆ ಅನನ್ಯವಾದದ್ದು ಎಂದರು.
ಜಾಲತಾಣಗಳ ಸ್ವೇಚ್ಛೆಗೆ ಕಡಿವಾಣ ಬೇಕು:
ವಿಜಯ ಕರ್ನಾಟಕ ಮಂಗಳೂರು ಆವೃತ್ತಿಯ ಸ್ಥಾನೀಯ ಸಂಪಾದಕ ಬಿ.ರವೀಂದ್ರ ಶೆಟ್ಟಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ವಿಶ್ವಾಸ, ಭರವಸೆ, ನಂಬಿಕೆಗಳು ಮಾಧ್ಯಮಗಳಲ್ಲಿ ದೂರವಾಗುತ್ತಿದೆ. ಇದನ್ನು ಉಳಿಸಿಕೊಳ್ಳಬೇಕಾಗ ಅಗತ್ಯ ಇದೆ. ಸತ್ಯ ವಿಚಾರಗಳನ್ನು ತಿಳಿಸುವ ಕೆಲಸ ಪತ್ರಿಕೆಗಳದ್ದು. ಈಗ ಪತ್ರಿಕೋದ್ಯಮ ಕವಲುದಾರಿಯಲ್ಲಿ ಇರುವಾಗ ಸಾಮಾಜಿಕ ಮಾಧ್ಯಮ ಪ್ರವೇಶಿಸಿದೆ. ಜಾಲತಾಣಗಳ ಸುಳ್ಳು ಸಂತೆಯ ನಡುವೆ ಸತ್ಯ ಹುಡುಕುವ ಜವಾಬ್ದಾರಿ ಪತ್ರಿಕೆಗಳ ಮೇಲೆ ಇದೆ. ಮಾಧ್ಯಮಗಳು ಪರಿಣಾಮಕಾರಿಯಾಗಿ ವಿಶ್ವಾಸಾರ್ಹತೆಯಾಗಿ ಕೆಲಸ ಮಾಡಬೇಕು. ಜಾಲತಾಣಗಳ ಸ್ವೇಚ್ಛೆಗೆ ಕಡಿವಾಣ ಹಾಕಬೇಕಾಗಿದೆ ಎಂದು ಆಶಿಸಿದರು.
ನೈಜ ಸಂಗತಿ ತಲುಪಿಸಿ:
ದಾಯ್ಜಿಮೀಡಿಯಾ ಪ್ರೈ.ಲಿ. ವ್ಯವಸ್ಥಾಪಕ ಸಂಪಾದಕ ವಾಲ್ಟರ್ ನಂದಳಿಕೆ ಮಾತನಾಡಿ, ಆನ್‌ಲೈನ್ ಜಾಲತಾಣಗಳು ಈಗ ಡಿಜಿಟಲ್ ಮಾಧ್ಯಮ ವೇದಿಕೆಯನ್ನು ಪಡೆದುಕೊಂಡಿವೆ. ಮೊಬೈಲ್‌ನಲ್ಲೇ ಓದುವಿಕೆ, ಮನೋರಂಜನೆಯನ್ನು ಪಡೆಯುವ ಹಂತಕ್ಕೆ ಆಧುನಿಕ ಮಾಧ್ಯಮ ತಲುಪಿದೆ. ನಕಲಿ ಸುದ್ದಿಗಳ ಹಾವಳಿಯ ಭರಾಟೆಯ ನಡುವೆ ನೈಜ ಸಂಗತಿಗಳನ್ನು ಜನಮಾನಸಕ್ಕೆತಲುಪಿಸುವ ಜವಾಬ್ದಾರಿ ಮಾಧ್ಯಮಗಳ ಮೇಲೆ ಇದೆ ಎಂದರು.
ಸಮಾರೋಪದಲ್ಲಿ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರುಗಳನ್ನು ಸನ್ಮಾನಿಸಲಾಯಿತು.
ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಿದ್ದರು.
ಶಾಸಕ ಉಮಾನಾಥ ಕೋಟ್ಯಾನ್, ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್, ಮಾಜಿ ಸಚಿವರಾದ ನಾಗರಾಜ ಶೆಟ್ಟಿ, ಅಭಯಚಂದ್ರ ಜೈನ್, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ನಿರ್ದೇಶಕ ಖಾದರ್ ಶಾ, ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಕೋಶಾಧಿಕಾರಿ ಪುಷ್ಪರಾಜ್, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಇಬ್ರಾಹಿಂ ಅಡ್ಕಸ್ಥಳ ಮತ್ತಿತರರಿದ್ದರು.
ಸುವರ್ಣ ಸಂಭ್ರಮ ಸಮಿತಿ ಸಂಚಾಲಕ ಪಿ.ಬಿ.ಹರೀಶ್ ರೈ ಸ್ವಾಗತಿಸಿದರು. ಪತ್ರಕರ್ತ ಆರ್.ಸಿ.ಭಟ್ ನಿರೂಪಿಸಿದರು.
0 Comments