ಆಳ್ವಾಸ್‌ನಲ್ಲಿ ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞಾನದ ಕುರಿತ ವಿಚಾರ ಸಂಕಿರಣ

ಜಾಹೀರಾತು/Advertisment
ಜಾಹೀರಾತು/Advertisment

 ಆಳ್ವಾಸ್‌ನಲ್ಲಿ ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞಾನದ ಕುರಿತ ವಿಚಾರ ಸಂಕಿರಣ


ಮೂಡುಬಿದಿರೆ: ವೈದ್ಯಕೀಯ ನಿರ್ಧಾರಗಳು ಕ್ಲಿನಿಕಲ್ ಲ್ಯಾಬೋರೇಟರಿ ಫಲಿತಾಂಶಗಳ ಮೇಲೆ ಆಧಾರಿತವಾಗಿರುವುದರಿಂದ ಮೆಡಿಕಲ್ ಲ್ಯಾಬ್ ಟೆಕ್ನಾಲಜಿ ವಿಷಯದಲ್ಲಿ ಜ್ಞಾನವರ್ಧನೆ ಅಗತ್ಯವಿದೆ ಎಂದು ಆಳ್ವಾಸ್ ಹೆಲ್ತ್ ಸೆಂಟರ್‌ನ ಹೃದ್ರೋಗ ತಜ್ಞ ಡಾ. ಸದಾನಂದ್ ನಾಯ್ಕ ಹೇಳಿದರು.

ಅವರು ಆಳ್ವಾಸ್ ಅಲೈಡ್ ಹೆಲ್ತ್ ಸೈನ್ಸ್ ಕಾಲೇಜಿನ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ ವಿಭಾಗದ ವತಿಯಿಂದ `ಮೆಡಿಕಲ್ ಲ್ಯಾಬೋರೇಟರಿ ತಂತ್ರಜ್ಞಾನದಲ್ಲಿ ಆಗುತ್ತಿರುವ ನವೀಕರಣದ ಕುರಿತು ಕುವೆಂಪು ಸಭಾಂಗಣದಲ್ಲಿ ನಡೆದ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವೈದ್ಯಕೀಯ ಸೇವೆಗಳು ನೈತಿಕತೆ ಉಳಿಸಿಕೊಂಡು ಸಾಮಾನ್ಯರಿಗೂ ಕೈಗೆಟಕುವಂತಿರಬೇಕು. ವಿದ್ಯಾರ್ಥಿಗಳು ತಂತ್ರಜ್ಞಾನಗಳ ಕುರಿತು ಹೆಚ್ಚಿನ ಅಧ್ಯಯನ ಮಾಡಿ ವೈದ್ಯಕೀಯ ಕ್ಷೇತ್ರದ ನಿರ್ಧಾರಗಳನ್ನು ಅತ್ಯಂತ ವಿಶ್ವಾಸಾರ್ಹಗೊಳಿಸುವಲ್ಲಿ ಸಹಕರಿಸಬೇಕು ಎಂದರು.

ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಎಜೆ ಮೆಡಿಕಲ್ ಕಾಲೇಜಿನ ಪ್ರಾಧ್ಯಾಪಕ ಹಾಗೂ ಬ್ಲಡ್ ಬ್ಯಾಂಕ್ ಅಧಿಕಾರಿ ಡಾ. ಅರವಿಂದ್, ಟ್ರಾನ್ಸ್ಫ್ಯೂಷನ್ ಮೆಡಿಸಿನ್‌ನಲ್ಲಿ ವಿಶೇಷವಾಗಿ ರಕ್ತ ನಿಧಿಗಳಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳಲು ಅಗತ್ಯವಿರುವ ಕ್ರಮಗಳ ಕುರಿತು ಮಾಹಿತಿ ನೀಡಿದರು.  ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಬಯೋಕೆಮಿಸ್ಟ್ರಿ ವಿಭಾಗದ ಮುಖ್ಯಸ್ಥ ಡಾ. ಶಿವಶಂಕರ ಎ ಆರ್, ರೋಗನಿರ್ಣಯ ಮಾಡುವ ಲ್ಯಾಬೋರೇಟರಿಗಳಲ್ಲಿ ಗುಣಮಟ್ಟದ ನಿರ್ವಹಣೆ ಮಾಡುವ ಕ್ರಮಗಳ ಕುರಿತು ಹಾಗೂ ರಿವಾರ ಲ್ಯಾಬ್ಸ್ ರೀಜನಲ್ ಮ್ಯಾನೇಜರ್ ಡಾ. ನಂದಿತ್ ಬಿ ಅಣು ಸಂಬಂಧಿತ ಪರೀಕ್ಷಾ ವಿಧಾನದ ಮೂಲಕ ಸಾಂಕ್ರಾಮಿಕ ರೋಗಗಳ ರೋಗನಿರ್ಣಯಗಳನ್ನು ಮಾಡುವ ಇತ್ತೀಚಿನ ಬದಲಾವಣೆಗಳ ಕುರಿತು ಮಾಹಿತಿ ನೀಡಿದರು.

ಪದವಿ ವಿಭಾಗದ ಪೋಸ್ಟರ್ ಪ್ರಸ್ತುತಿಯಲ್ಲಿ ಶ್ರದ್ಧಾ ಪ್ರಥಮ ಸ್ಥಾನ ಪಡೆದರೆ, ಹಿಭಾ ದ್ವಿತೀಯ ಸ್ಥಾನ ಪಡೆದರು.  ಸ್ನಾತಕೋತ್ತರ ವಿಭಾಗದಲ್ಲಿ ಶಿವಾನಿ ಹಾಗೂ ವರ್ಧಮಾನ ಪ್ರಥಮ ಸ್ಥಾನವನ್ನು ಹಂಚಿಕೊಂಡರು. 


 ಸಂಸ್ಥೆಯ ಟ್ರಸ್ಟಿ ಡಾ. ಹನಾ ಶೆಟ್ಟಿ, ಪ್ರಾಂಶುಪಾಲ ಶಂಕರ ಶೆಟ್ಟಿ ಉಪಸ್ಥಿತರಿದ್ದರು. ರಾಜ್ಯದ ವಿವಿಧ ಅಲೈಡ್ ಹೆಲ್ತ್ ಸೈನ್ಸ್ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರಾಧ್ಯಾಪಿಕೆ ಶ್ರೀವನಿತಾ ವಂದಿಸಿದರು, ಬುಶ್ರಾ ಕಾರ್ಯಕ್ರಮ ನಿರೂಪಿಸಿದರು.

ರಾಜ್ಯದ ವಿವಿಧ ಕಾಲೇಜುಗಳಿಂದ ೨೫೦ಕ್ಕೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Post a Comment

0 Comments