"ಅಮೃತ ಮಹೋತ್ಸವದ ಮಹಾ ಮಸ್ತಕಾಭಿಷೇಕ ಸಂಭ್ರಮದಲ್ಲಿ ಶ್ರೀ ಕ್ಷೇತ್ರ ಗೊಮ್ಮಟ ಗಿರಿ ಶ್ರೀಬಾಹುಬಲಿ"
ಸುತ್ತಲೂ ಅಚ್ಚಹಸಿರು, ಅಲ್ಲಲ್ಲಿ ಜಲ ರಾಶಿ, ಈ ಮಧ್ಯೆ ಹಾಸು ಹೊಕ್ಕಾದ ಬೃಹತ್ ಕಪ್ಪು ಕಲ್ಲಿನ ಬಂಡೆ, ಈ ನಡುವೆ ಕಂಗೊಳಿಸುವ ಐತಿಹಾಸಿಕ ತಾಣ ಗೊಮ್ಮಟಗಿರಿಯ ಬಾಹುಬಲಿಯ ನಗು ಮೊಗದ ಮನಮೋಹಕ ಮೂರ್ತಿ.ಅಮೃತ ಮಹೋತ್ಸವದ ಮಹಾ ಮಸ್ತಕಾಭಿಷೇಕಕ್ಕೆ ಕ್ಷೇತ್ರ ಸಜ್ಜುಗೊಂಡಿದೆ.
ಕನ್ನಡ ನಾಡಿನ ಸಾಂಸ್ಕೃತಿಕ ನಾಡು, ಕಲೆ ,ಸಾಹಿತ್ಯ, ಸಂಸ್ಕೃತಿಗಳ ವೈಭವದ ಬೀಡಾದ ಮೈಸೂರು ಜಿಲ್ಲೆಯು ಕಾವೇರಿ ಮಡಿಲಿನ ತಾಣ .ಶಾಂತಿ, ಅಹಿಂಸೆ, ತ್ಯಾಗದ ಬೀಡಾದ ಗೋಮ್ಮಟಗಿರಿ ,ಪ್ರಕೃತಿಯ ನಡುವೆ ಹಾಸು ಹೊಕ್ಕದ ಕರಿ ಕಲ್ಲಿನ ಹೆಬ್ಬಂಡೆ ಯ ಮೇಲೆ 16 ಅಡಿಗಳ ಏಕಶಿಲಾ ಮೂರ್ತಿಗೆ ಈಗ ಅಮೃತ ಮಹೋತ್ಸವದ ಮಹಾಮಸ್ತಕಾಭಿಷೇಕದ ಸಂಭ್ರಮ ಸಡಗರ.
ಕನ್ನಡ ನಾಡಿನಲ್ಲಿ ಹತ್ತಾರು ಗುಮ್ಮಟ ಮೂರ್ತಿಗಳಿದ್ದು ಈ ಪೈಕಿ ಗುಮ್ಮಟಗಿರಿಯ ಶ್ರೀ ಬಾಹುಬಲಿ ಮೂರ್ತಿಯು ಒಂದು. 1949ರಲ್ಲಿ ಮೊಟ್ಟಮೊದಲ ಬಾರಿಗೆ ಈ ಗೊಮ್ಮಟ ಮೂರ್ತಿಗೆ ಮಹಾ ಮಸ್ತಕಾಭಿಷೇಕ ಮಾಡಲಾಯಿತು ಈಗ 75 ನೇ ಮಹಾಮಸ್ತಕಾಭಿಷೇಕ ದ ಅಮೃತ ಮಹೋತ್ಸವಕ್ಕೆ ಕ್ಷೇತ್ರ ಸಜ್ಜುಗೊಂಡಿದೆ.
1948 ರಲ್ಲಿ ಈ ಗೊಮ್ಮಟಗಿರಿ ಪ್ರದೇಶದ ಅರಣ್ಯ ಭಾಗದಲ್ಲಿ ದನ ಕಾಯುವ ವ್ಯಕ್ತಿಯು ಒಮ್ಮೆ ಕಾಡಿನಲ್ಲಿ ದನ ಗಳೊಂದಿಗೆ ಸಂಚಾರದಲ್ಲಿದ್ದಾಗ ಈ ಬೃಹತ್ ಬಂಡೆಯ ಮೇಲೆ ಗುಮ್ಮಟ ಮೂರ್ತಿ ಇರುವುದು ಅವನ ಕಣ್ಣಿಗೆ ಬಿದ್ದಿತು, ಈ ವಿಚಾರವನ್ನು ಮೈಸೂರಿನ ಜೈನ ಸಮಾಜದ ಪ್ರಮುಖರಾದ ಸಿ.ಬಿ.ಎಂ ಚಂದ್ರಯ್ಯ ನವರ ಗಮನಕ್ಕೆ ತಂದರು. ಈ ಸಂಬಂಧ ಸ್ಥಳ ಪರಿಶೀಲನೆ ನಡೆಸಿದ ಚಂದ್ರಯ್ಯ ಹಾಗೂ ತಂಡದ ಸದಸ್ಯರು ಈ ಗುಮ್ಮಟ ಮೂರ್ತಿಯನ್ನು ಗಿಡ -ಗೆಂಟಿ , ಕಸ- ಕಡ್ಡಿ ,ಎಲೆ -ತರಗು ಗಳಿಂದ ಸ್ವಚ್ಛಗೊಳಿಸಿ ಕ್ಷೇತ್ರಕ್ಕೆ ಹೊಸ ರೂಪ ನೀಡಿದರು.
ಈ ವಿಚಾರವನ್ನು ಅಂದು ಶ್ರೀ ಕ್ಷೇತ್ರ ಹೊಂಬುಜ ಮಠದ ಆಡಳಿತ ವ್ಯಾಪ್ತಿಗೆ ಒಳಪಟ್ಟಿದ್ದರಿಂದ ಅಂದಿನ ಪೂಜ್ಯ ಭಟ್ಟಾರಕರ ಗಮನಕ್ಕೆ ತಂದು ಅದಕ್ಕೆ ಹೊಸ ರೂಪ ನೀಡಿ ಒಂದು ಶ್ರದ್ಧಾ ಕೇಂದ್ರವನ್ನಾಗಿ ಮಾಡಿ 1949 ರಲ್ಲಿ ಮೊದಲ ಮಸ್ತಕಾಭಿಷೇಕ ನೆರವೇರಿಸಲು ಕಾರಣರಾದರು. ಈಗ 75 ಮಹಾಮಸ್ತಕಾಭಿಷೇಕ ಕ್ಕೆ ಕ್ಷಣಗಣನೆ ಆರಂಭವಾಗಿದೆ.
ಶ್ರೀ ಕ್ಷೇತ್ರಕ್ಕೆ ಈ ಹಿಂದೆ" ಗೊಮ್ಮಟಪುರ "ಎಂಬ ಹೆಸರಿತ್ತು ಶ್ರೀ ಕ್ಷೇತ್ರದ ಬಗ್ಗೆ ಕವಿ ಮಂಗರಸ ನೇಮಿಚಂದ್ರ ಜಿನ ಸ್ತುತಿಯಲ್ಲಿ ಕ್ಷೇತ್ರವನ್ನು ವರ್ಣಿಸಿದ್ದಾನೆ.
ಶ್ರೀ ಕ್ಷೇತ್ರದ ಗೊಮ್ಮಟ ಮೂರ್ತಿಯ ದರ್ಶನ ಪಡೆಯಲು ನೆಲಮಟ್ಟದಿಂದ 80 -85 ಮೆಟ್ಟಿಲುಗಳನ್ನು ಕ್ರಮಿಸಬೇಕಿದೆ. ಎರಡು ಪಾದಗಳ ತಳದಿಂದ ಬಳ್ಳಿಯಂತೆ ಸರ್ಪಗಳು ಇರುವುದು ವಿಶೇಷವಾದದ್ದು ಇಲ್ಲಿ ನಾಗದೋಷ ಪರಿಹಾರ ಹಾಗೂ ಮದುವೆಗಳು ನಡೆಯುತ್ತವೆ.
ಈ ಹಿಂದೆ ಜೈನ ಧರ್ಮದ ಸಾಂಸ್ಕೃತಿಕ ಕೇಂದ್ರವಾಗಿದ್ದ ಈ ಭಾಗವನ್ನು ಆಳ್ವಿಕೆ ನಡೆಸಿದ ಗಂಗರು, ಹೊಯ್ಸಳರು ,ವಿಜಯನಗರ ಅರಸರು, ಮೈಸೂರು ಅರಸರು ಹಾಗೂ ಸಾಮಂತ ಅರಸರು ಆಳ್ವಿಕೆ ನಡೆಸಿದ್ದಾರೆ. ಇವರುಗಳ ಕಾಲದಲ್ಲಿ ಜೈನ ಧರ್ಮ ಉಚ್ರಾಯ ಸ್ಥಿತಿಯಲ್ಲಿತ್ತು.
ವಿಜಯನಗರ ಅರಸರ ಕಾಲದಲ್ಲಿ ಈ ಪ್ರದೇಶ ಅವರ ಸಾಮಂತ ದೊರೆಗಳಾದ ಚೆಂಗಾಳ್ವರ ಆಳ್ವಿಕೆಗೆ ಒಳಪಟ್ಟಿತ್ತು ,ಈ ಪ್ರದೇಶವನ್ನು" ಚೆಂಗು ನಾಡು" ಎಂದು ಕರೆಯಲಾಗಿದೆ . ಅಲ್ಲದೇ ಈ ಪ್ರದೇಶವು ಹನಸೋಗೆ (ಪನಸೋಗೆ) ಜೈನ ಮಠದ ವ್ಯಾಪ್ತಿಗೆ ಸೇರಿದ್ದು, ನಂತರದ ದಿನಗಳಲ್ಲಿ ಈ ಕ್ಷೇತ್ರವು ಹೊಂಬುಜ ಜೈನ ಮಠ ದ ವ್ಯಾಪ್ತಿಗೆ ಒಳಪಟ್ಟಿತು. ಅಲ್ಲದೇ ಹನಸೊಗೆ , ( ಪನಸೋಗೆ )ಕಲ್ಲಹಳ್ಳಿ, ಬಸದಿ ಹೊಸಕೋಟೆ ,ಅರೆ ತಿಪ್ಪೂರು,( ಆರತಿಪುರ )ಹಾಗೂ ಕನಕಗಿರಿ ಸೇರಿದಂತೆ ಈ ಭಾಗದಲ್ಲಿ ಹಲವಾರು ಜೈನ ತಾಣಗಳಿದ್ದವು.
ಚೆಂಗಾಳ್ವ ದೊರೆಗಳ ಆಳ್ವಿಕೆಯಲ್ಲಿ ,ಈ ಪ್ರದೇಶದಲ್ಲಿ ಜೈನ ಧರ್ಮ ಉನ್ನತ ಸ್ಥಾನದಲ್ಲಿತ್ತು .ನೆಲಮಟ್ಟದಿಂದ 200 ಅಡಿಗಳ ಎತ್ತರದ ಕರಿ ಬಂಡೆಯ ಮೇಲೆ ಪ್ರಕೃತಿಯ ಅಚ್ಚ ಹಸಿರಿನ ನಡುವೆ ನೆಲೆ ನಿಂತ ಈ ಗುಮ್ಮಟ ಮೂರ್ತಿ 16 ಅಡಿಗಳ ಎತ್ತರವಿದೆ. ಇದೊಂದು ಶ್ರದ್ಧಾ ಕೇಂದ್ರವಾಗಿದ್ದು ,ಈ ಮೂರ್ತಿಯನ್ನು ನಿಲ್ಲಿಸಿದ್ದ ಕೀರ್ತಿ ಚಂಗಾಳ್ವ ದೊರೆಗಳಿಗೆ ಸಲ್ಲುತ್ತದೆ .ಇದನ್ನ ಶ್ರವಣಪ್ಪನ ಗುಡ್ಡ, ಸವಣಪ್ಪನ ಗುಡ್ಡ ಎಂದು ಕರೆದಿದ್ದು, ಚಂಗಾಳ್ವರ,ಅವನತಿಯ ನಂತರ ನಿರ್ಲಕ್ಷಕ್ಕೆ ಒಳಗಾದ ಈ ಪ್ರದೇಶ, ದಟ್ಟ ಅರಣ್ಯದ ಮುಳ್ಳು ,ಬೇಲಿ, ಗಿಡ , ಗೆಂಟಿ ನಡುವೆ ಹುದುಗಿ ಹೋಗಿತ್ತು.ಅವನತಿಯ ನಂತರ ನಂತರದ ದಿನಗಳಲ್ಲಿ ಈ ಪ್ರದೇಶವನ್ನು ಕೊಂಗಾಳ್ವರು ಆಳ್ವಿಕೆ ನಡೆಸಿದರು. ಅಲ್ಲದೆ ಅರಣ್ಯ ಇಲಾಖೆ ನಿರ್ಲಕ್ಷಕ್ಕೂ ಕಾರಣವಾಗಿತ್ತು
ಈ ಗೋಮ್ಮಟಗಿರಿ ಶ್ರೀ ಕ್ಷೇತ್ರ ಹೊಂಬುಜ ಜೈನ ಮಠದ ಆಡಳಿತ ವ್ಯಾಪ್ತಿಗೆ ಸೇರಿದೆ.
ಈ ಗೊಮ್ಮಟ ಮೂರ್ತಿಯನ್ನು ರಾಜ್ಯ ಸರ್ಕಾರ ಈ ಹಿಂದೆ. "ಸುರಕ್ಷಿತ ಸ್ಮಾರಕ ". ಎಂದು ಘೋಷಿಸಿದೆ.
ಈ ಹಿಂದೆ ಹುಣಸೂರು ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ.ಡಿ
ದೇವರಾಜ ಅರಸು ರವರು ಈ ಗೊಮ್ಮಟ ಗಿರಿ ಕ್ಷೇತ್ರಕ್ಕೆ 25 ಎಕರೆ ಜಮೀನನ್ನು ಮಂಜೂರು ಮಾಡಿದ್ದರು .ಅಧಿಕಾರಿಗಳ ನಿರ್ಲಕ್ಷ ಹಾಗೂ ಜೈನ ಧರ್ಮಿಯರ ಬೇಜವಾಬ್ದಾರಿಯಿಂದ ಮಂಜೂರಾತಿ ಪತ್ರ ಕಸದ ಬುಟ್ಟಿ ಸೇರಿತು. ಅವರ ಆದೇಶವು ಇತಿಹಾಸ ಪುಟಗಳಲ್ಲಿ ಲೀನವಾಯಿತು.
ಈ ಐತಿಹಾಸಿಕತಾಣ ಗೊಮ್ಮಟಗಿರಿ ರಾಜಧಾನಿ ಬೆಂಗಳೂರಿನಿಂದ 160 ಕಿ.ಮೀ, ಜಿಲ್ಲಾ ಕೇಂದ್ರ ಮೈಸೂರಿನಿಂದ 26 ಕಿ.ಮೀ ,ತಾಲೂಕು ಕೇಂದ್ರ ಹುಣಸೂರಿನಿಂದ 29 ಕಿ .ಮೀ, ಹೋಬಳಿ ಕೇಂದ್ರ ಬಿಳಿ ಕೆರೆಯಿಂದ 10 ಕಿ.ಮೀ ,ಮೈಸೂರು -ಮಾಣಿ -ಬಂಟ್ವಾಳ ರಾಷ್ಟ್ರೀಯ ಹೆದ್ದಾರಿಯ ಇಲವಾಲದಿಂದ 5 ಕಿ.ಮೀ ದೂರವಿದೆ.
ಶ್ರೀ ಗೊಮ್ಮಟಗಿರಿಯ ಗೊಮ್ಮಟಮೂರ್ತಿಗೆ 2024 ರ ಡಿಸೆಂಬರ್ 12 ,13 ,14 ,ರಂದು ಅಮೃತ ಮಹೋತ್ಸವದ ಅಂಗವಾಗಿ ಮಹಾ ಮಸ್ತಕಾಭಿಷೇಕ ನಡೆಯಲಿದೆ.
ಶ್ರೀ ಗೊಮ್ಮಟಗಿರಿ ಬೆಟ್ಟದ ತಪ್ಪಲಿನಲ್ಲಿ 24 ತೀರ್ಥಂಕರರ ಕೂಟಗಳನ್ನು ಸ್ಥಾಪಿಸಲಾಗಿದೆ.
ಶ್ರೀ ಭಗವಾನ್ ಮಹಾವೀರರ ಜಲಮಂದಿರ 23 ಅಡಿಗಳ ಬೃಹತ್ ಮಾನಸ್ಥಂಭ .ಅದರ ಮೇಲೆ ಬ್ರಹ್ಮ ಯಕ್ಷರನ್ನು ಇತ್ತೀಚಿಗೆ ಸ್ಥಾಪಿಸಲಾಗಿದೆ. ತ್ಯಾಗಿ ಮಂದಿರ ,ಸಮವಸರಣ ಮಂದಿರ, ಯಾತ್ರೆ ನಿವಾಸಗಳನ್ನು ಶ್ರೀ ಕ್ಷೇತ್ರದಲ್ಲಿ ನಿರ್ಮಿಸಲಾಗಿದೆ .ಬೆಟ್ಟದ ಮೇಲಿಂದ ಕಾಣುವ ಪ್ರಕೃತಿಯ ನೋಟ ,ಕೆ.ಆರ್.ಎಸ್ ಜಲಾಶಯ ನೋಡುಗರ ಕಣ್ಮನ ಸೆಳೆಯುತ್ತದೆ .ಪ್ರಶಾಂತವಾದ ಪ್ರಕೃತಿ ಅಚ್ಚ ಹಸಿರಿನ ಮಧ್ಯ ಕಂಗೊಳಿಸುವ ಈ ಕ್ಷೇತ್ರದಲ್ಲಿ ಹಕ್ಕಿ ಪಕ್ಷಿಗಳ ಚಿಲಿಪಿಲಿ ನೀನಾದಗಳ ನಡುವೆ ಶಾಂತಿ ಹಾಗೂ ಅಹಿಂಸೆ ಸಾರುವ ಈ ಗೊಮ್ಮಟ ಗಿರಿ ನೋಡೋಣ ,ನಮಿಸೋಣ, ಕಣ್ತುಂಬಿ ಕೊಳ್ಳೋಣ, ತ್ಯಾಗ ,ಶಾಂತಿ ,ಅಹಿಂಸೆ ತತ್ವ ಸಾರೋಣ.
0 Comments