ತ್ರೈಮಾಸಿಕ ಪತ್ರಿಕೆ 'ಆಳ್ವಾಸ್ ಹೊಂಗಿರಣ' ಬಿಡುಗಡೆ

ಜಾಹೀರಾತು/Advertisment
ಜಾಹೀರಾತು/Advertisment

 ತ್ರೈಮಾಸಿಕ ಪತ್ರಿಕೆ 'ಆಳ್ವಾಸ್ ಹೊಂಗಿರಣ' ಬಿಡುಗಡೆ 

ಮೂಡುಬಿದಿರೆ : ಶಿಕ್ಷಣ, ಸಂಸ್ಕೃತಿ, ಕಲೆ, ಕ್ರೀಡೆ  ಸೇರಿದಂತೆ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ  ಸರ್ವಾಂಗೀಣ ಚಟುವಟಿಕೆಗಳನ್ನು ಅರ್ಥಪೂರ್ಣವಾಗಿ ಸಂಘಟಿಸುತ್ತಾ ಬಂದಿರುವ  ಆಳ್ವಾಸ್ ಸಂಸ್ಥೆಯ ಮಾಹಿತಿಯನ್ನು ಹೊತ್ತು ತರುವ ‘ಆಳ್ವಾಸ್ ಹೊಂಗಿರಣ’ವು ಪ್ರಕಾಶಮಾನವಾಗಲಿ’ ಎಂದು ಉಜಿರೆಯ ಎಸ್‌ಡಿಎಂ ಕಾಲೇಜು (ಸ್ವಾಯತ್ತ) ಪ್ರಾಂಶುಪಾಲ ಡಾ.ಬಿ.ಎ.ಕುಮಾರಹೆಗ್ಡೆ  ಹೇಳಿದರು. 


ಅವರು ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದ ಡಾ.ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಗುರುವಾರ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಆಯೋಜಿಸಿದ ಆಳ್ವಾಸ್ ಪದವಿ ಪೂರ್ವ ಕಾಲೇಜು ಹಾಗೂ ಶಾಲೆಗಳ ತ್ರೈಮಾಸಿಕ ಸಂಚಿಕೆ ‘ಆಳ್ವಾಸ್ ಹೊಂಗಿರಣ’ವನ್ನು ಬಿಡುಗಡೆಗೊಳಿಸಿ ಮಾತನಾಡಿದರು. 

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಮೂರು ದಶಕಗಳಿಗೂ ಅಧಿಕ ಯಶೋಗಾಥೆ ಹೊಂದಿದ್ದು, ಇಲ್ಲಿನ ಮಾಹಿತಿಯನ್ನು ನೀಡುವ ಪತ್ರಿಕೆಯನ್ನು ನಾನು ಅತ್ಯಂತ ಸಂತಸದಿಂದ ಬಿಡುಗಡೆಗೊಳಿಸಿದ್ದೇನೆ ಎಂದರು. 

ಹಾಲನ್ನು ‘ಕ್ಷೀರ’ ಎನ್ನುವುದು ಉತ್ಪ್ರೇಕ್ಷೆಯಲ್ಲ. ಅಂತೆಯೇ ಆಳ್ವಾಸ್ ನ್ನು ನೀವು ಎಷ್ಟು ಬಣ್ಣಿಸಿದರೂ, ಅದು ವಿಶೇಷವಲ್ಲ. ಆಳ್ವಾಸ್ ‘ಕ್ಷೀರ ಸಾಗರ’. ಆಳ್ವಾಸ್ ಆವರಣವು ನಮ್ಮೆಲ್ಲರಿಗೂ ಎರಡನೇ ಮನೆ. ಈ ಭಾವನೆ ಮೂಡಿಸಿದ ಡಾ.ಎಂ. ಮೋಹನ ಆಳ್ವರು, ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದಂತೆ ‘ಮಹಾನ್ ಆಳ್ವರು’ ಎಂದು ಸಂತಸ ವ್ಯಕ್ತಪಡಿಸಿದರು.  

 

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ, ಪತ್ರಿಕೆಯ ಸಮೂಹ ಸಂಪಾದಕ ಡಾ. ಎಂ. ಮೋಹನ ಆಳ್ವ ಮಾತನಾಡಿ, ನನ್ನ ಬದುಕು ಜನಪದರ ದಾಖಲೆಗಳಿಲ್ಲದ ಮೌಖಿಕ ಚರಿತ್ರೆಯ ಹಾಗೆ ನಡೆದು ಬಂದಿದೆ. ಆದರೆ, ಬದುಕಿನಲ್ಲಿ ಕೆಲಸದಷ್ಟೇ ದಾಖಲೆಗಳೂ ಮುಖ್ಯ. ಈ ನಿಟ್ಟಿನಲ್ಲಿ ಮೊದಲ ಬಾರಿಗೆ ‘ಆಳ್ವಾಸ್ ಹೊಂಗಿರಣ’ದ ಮೂಲಕ ನಮ್ಮ ಶಾಲೆಗಳ ಹಾಗೂ ಪದವಿಪೂರ್ವ ಕಾಲೇಜುಗಳ ಮಾಹಿತಿಯನ್ನು ದಾಖಲಿಸುವ ಕಾರ್ಯಕ್ಕೆ ಹೆಜ್ಜೆ ಇಟ್ಟಿದ್ದೇವೆ. ಇದರ ಯಶಸ್ಸು ಪ್ರತಿಷ್ಠಾನದ ಕಾರ್ಯಗಳ ದಾಖಲೀಕರಣದ ವರೆಗೆ ಪಸರಿಸಲಿ’ ಎಂದು ಆಶಿಸಿದರು. 

 ಸಂಸ್ಥೆಯ ಮುಂದಿನ ಎಲ್ಲಾ ಕಾರ್ಯ ಚಟುವಟಿಕೆಗಳನ್ನು ದಾಖಲೆ ಮಾಡಲು ಪ್ರಯತ್ನಿಸುತ್ತಿದ್ದೇನೆ ಎಂದ ಅವರು, ಎಲ್ಲ ವಿದ್ಯಾರ್ಥಿಗಳು  ತಮ್ಮ ಸಾಧನೆಗಳ ವಿವರಗಳನ್ನು ಸಾಧ್ಯವಾದಷ್ಟು ದಾಖಲೆ ಮಾಡಿಟ್ಟುಕೊಳ್ಳುವುದು ಬಹಳ ಉತ್ತಮ ಎಂದರು.


ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಆಳ್ವಾಸ್ ಕಾಲೇಜು (ಸ್ವಾಯತ್ತ) ಪ್ರಾಂಶುಪಾಲ ಡಾ.ಕುರಿಯನ್, ಆಳ್ವಾಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ಮೊಹಮ್ಮದ್ ಸದಾಕತ್ , ಉಪಪ್ರಾಂಶುಪಾಲೆ ಪ್ರೊ. ಝಾನ್ಸಿ ಪಿ. ಎನ್. ಇದ್ದರು.

ಕನ್ನಡ ಸಾಹಿತ್ಯ ಪರಿಷತ್ತು ಮೂಡುಬಿದಿರೆ ತಾಲ್ಲೂಕು ಘಟಕದ ಅಧ್ಯಕ್ಷ, ಆಳ್ವಾಸ್ ಪ.ಪೂ ಕಾಲೇಜಿನ ಕಲಾ ವಿಭಾಗದ ಡೀನ್ ಕೆ. ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಆಳ್ವಾಸ್ ಸಾಂಸ್ಕೃತಿಕ ತಂಡದ ಸದಸ್ಯರು ಪ್ರಾರ್ಥನೆ ಹಾಡಿದರು.

Post a Comment

0 Comments