ಹಿಂಜಾವೇಯಿಂದ ಮೂಡುಬಿದಿರೆಯಲ್ಲಿ ಪಂಜಿನ ಮೆರವಣಿಗೆ

ವಿನಯ್ ಕುಮಾರ್ ಅಧ್ಯಕ್ಷರು ಮತ್ತು ಸವ೯ ಸದಸ್ಯರು

ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸರ್ವೋದಯ ಫ್ರೆಂಡ್ಸ್ ಬೆದ್ರ

 ಹಿಂಜಾವೇಯಿಂದ ಮೂಡುಬಿದಿರೆಯಲ್ಲಿ ಪಂಜಿನ ಮೆರವಣಿಗೆ


ಮೂಡುಬಿದಿರೆ: ಪಾಕಿಸ್ತಾನ ಮತ್ತು ಬಾಂಗ್ಲಾದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಸಹಿಸಲು ಅಸಾಧ್ಯ. ಭಾರತ, ಪಾಕಿಸ್ತಾನ, ಬಾಂಗ್ಲಾ ಸೇರಿದಂತೆ ಭಾರತದಲ್ಲಿ ಪುರಾತನ ಕಾಲದಲ್ಲಿ ಅಳವಡಿಕೆಯಾಗಿದ್ದ ಭಾಗಗಳು ಒಟ್ಟು ಸೇರಿ ಅಖಂಡ ಭಾರತ ನಿರ್ಮಾಣ ನಮ್ಮ ಸಂಕಲ್ಪ ಆಗಬೇಕಾಗಿದೆ ಎಂದು ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ನ ಮಂಗಳೂರು ವಿಭಾಗ ಪ್ರಮುಖ್ ಕೇಶವ ಬಂಗೇರ ಹೇಳಿದರು.


ಇಲ್ಲಿನ ಹಿಂದೂ ಜಾಗರಣ ವೇದಿಕೆಯ ವತಿಯಿಂದ ನಡೆದ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ನಡೆದ  ಬೃಹತ್ ಪಂಜಿನ ಮೆರವಣಿಗೆಯ ಅಂಗವಾಗಿ  ಸಮಾಜ ಮಂದಿರದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣಗೈದರು.  ಭಾರತಕ್ಕೆ ಸ್ವಾತಂತ್ರ್ಯ ಸಿಗುವಲ್ಲಿ ಲಕ್ಷಾಂತರ ಯುವಕರು ತಮ್ಮ ಕನಸುಗಳನ್ನು ತ್ಯಾಗ ಮಾಡಿ ಪ್ರಾಣಾರ್ಪಿಸಿದ್ದಾರೆ. ಅವರ ಬಲಿದಾನ ವ್ಯರ್ಥವಾಗಲು ಅವಕಾಶ ನೀಡಬಾರದು ಎಂದು ಹೇಳಿದರು.

ಮೂಡುಬಿದಿರೆಯ ನ್ಯಾಯವಾದಿ ಶರತ್ ಶೆಟ್ಟಿ ಸಭಾಧ್ಯಕ್ಷತೆ ವಹಿಸಿ ಮಾತನಾಡಿ ಎರಡು ಬಾರಿ ಕರಿ ನೀರಿನ ಶಿಕ್ಷೆ ಅನುಭವಿಸಿದ ವೀರ ಸಾವರ್ಕರ್‌ರನ್ನೇ ಟೀಕೆ ಮಾಡುವ ಜನರ ನಡುವೆ ನಾವು ಬದುಕುವಂತಾಗಿದೆ. ರಾಜ್ಯದ ವಿಧಾನಸೌಧದಲ್ಲೇ ಪಾಕ್‌ಪರ ಘೋಷಣೆ ಕೂಗಿದ ದೇಶ ವಿರೋಧಿಗಳಿಗೆ ಪರವಾಗಿರುವ ಜನರ ಹೇಯ ಮಾನಸಿಕತೆಯನ್ನು ಖಂಡಿಸಬೇಕಾಗಿದೆ ಎಂದರು.


ವಿದ್ಯಾರ್ಥಿಗಳ ಪಠ್ಯ ಪುಸ್ತಕದಲ್ಲಿ ನಮ್ಮ ದೇಶದ ಮೇಲೆ ದಾಳಿ ಮಾಡಿದ ರಾಜರುಗಳನ್ನೇ ವೈಭವೀಕರಣ ಮಾಡಲಾಗುತ್ತಿದೆ. ದೇಶದ ಪರಂಪರೆ, ಸಂಸ್ಕೃತಿ, ಅಭಿವೃದ್ಧಿಗೆ ಸಾಕಷ್ಟು ಶ್ರಮ ವಹಿಸಿದ ರಾಜ ಮಹಾರಾಜರುಗಳು ಗೌಣವಾಗುತ್ತಿರುವುದು ವಿಷಾದಕರ. ಈ ರಾಜರುಗಳ ಸಾಧನೆಗಳು ಇತಿಹಾಸದ ಪುಟಗಳಲ್ಲಿ ಎದ್ದು ತೋರಬೇಕಾಗಿದೆ ಎಂದು ಹೇಳಿದರು.



ಪ್ರಾಂತ್ಯ ಕಾರ್ಯಕಾರಿಣಿ ಸದಸ್ಯೆ ಪ್ರಜ್ಞಾ ಕಾಶ್ಯಪ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾರತ್ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಕಾರ್ಯಕ್ರಮ ಪ್ರಾರಂಭಿಸಲಾಯಿತು.


ಸಭಾಕಾರ್ಯಕ್ರಮಕ್ಕೆ ಮುಂಚಿತವಾಗಿ ಸಾವಿರ ಕಂಬದ ಬಸದಿಯಲ್ಲಿ ಪಂಜಿನ ಮೆರವಣಿಗೆಗೆ ಚಾಲನೆ ನೀಡಿದ ಶ್ರೀ ಜೈನ ಮಠದ ಸ್ವಸ್ತಿ ಶ್ರೀ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರು ಬಾಂಗ್ಲಾ ದೇಶದಲ್ಲಿ ಆರಾಜಕತೆ ಸೃಷ್ಟಿಸಿ ಹಿಂದುಗಳ ಮೇಲೆ ದೌರ್ಜನ್ಯ ನಡೆಯುತ್ತಿರುವುದನ್ನು ಖಂಡಿಸಿದರು. ಈ ಘಟನೆಗಳಿಗೆ ಉತ್ತರ ನೀಡುವಲ್ಲಿ ಹಿಂದು ಸಮಾಜ ಸಶಕ್ತವಾಗಬೇಕು. ಮಠ ಮಂದಿರಗಳು ಸಂಪೂರ್ಣವಾಗಿ ಬೆಂಬಲ ನೀಡುತ್ತೇವೆ ಎಂದು ಹೇಳಿದರು.


ತಾಲೂಕು ಸಂಯೋಜಕ್ ಹರೀಶ್ಚಂದ್ರ ಕೆ.ಸಿ. ವೇದಿಕೆಯಲ್ಲಿದ್ದರು. ಜಿಲ್ಲಾ ಸಹಸಂಯೋಜಕ್ ಸಮಿತ್‌ರಾಜ್ ದರೆಗುಡ್ಡೆ ಸ್ವಾಗತಿಸಿದರು. ಸಂದೀಪ್ ಸುವರ್ಣ ಕೆಲ್ಲಪುತ್ತಿಗೆ ಧನ್ಯವಾದವಿತ್ತರು. ಗಣೇಶ್ ಅಳಿಯೂರು ಕಾರ್ಯಕ್ರಮ ನಿರೂಪಿಸಿದರು.


ಜಾಗರಣ ವೇದಿಕೆ ಪ್ರಮುಖರಾದ ಮಹೇಶ್ ಬೈಲೂರು, ರವಿರಾಜ್ ಕಡಂಬ, ಸಂತೋಷ್ ಜೈನ್, ಶರತ್ ಮಿಜಾರು, ಸಂದೀಪ್ ಹೆಗ್ಡೆ, ಬಿಜೆಪಿ ಮಂಡಲ ಅಧ್ಯಕ್ಷ ದಿನೇಶ್ ಪುತ್ರನ್, ಪ್ರಧಾನ ಕಾರ್ಯದರ್ಶಿ ರಂಜಿತ್ ಪೂಜಾರಿ, ಲಕ್ಷ್ಮಣ್ ಪೂಜಾರಿ ಉಪಸ್ಥಿತರಿದ್ದರು.


ಸುಮಾರು ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಹಿಂದು ಭಾಂಧವರು ಪಂಜಿನ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

Post a Comment

0 Comments

Advertisement