ಶ್ರೀ ಮಹಾವೀರ ಕಾಲೇಜಿನಲ್ಲಿ ಸಂಸ್ಥಾಪಕರ ದಿನಾಚರಣೆ ಮತ್ತು ವಾರ್ಷಿಕೋತ್ಸವ

ಜಾಹೀರಾತು/Advertisment
ಜಾಹೀರಾತು/Advertisment

 ಶ್ರೀ ಮಹಾವೀರ ಕಾಲೇಜಿನಲ್ಲಿ ಸಂಸ್ಥಾಪಕರ ದಿನಾಚರಣೆ ಮತ್ತು ವಾರ್ಷಿಕೋತ್ಸವ



ಮೂಡುಬಿದಿರೆ: ಗ್ರಾಮೀಣ ಪ್ರದೇಶದ ಮಕ್ಕಳಿಗೆ ಶಿಕ್ಷಣ ದೊರೆಯುವಂತಾಗಲು ಈ ಸಂಸ್ಥೆಗಳನ್ನು ಮಾಡಲಾಗಿದೆ. ಜೈನ ಕಾಶಿಯನ್ನು ಜ್ಞಾನ ಕಾಶಿಯಾಗಿ ಮಾಡುವಲ್ಲಿ ಮಹಾವೀರ ಕಾಲೇಜು ದೊಡ್ಡ ಪಾತ್ರ ವಹಿಸಿದೆ ಎಂದು ಮಣಿಪಾಲ ಮಾಹೆಯ ವೈಸ್ ಚಾನ್ಸೆಲರ್ ಮಣಿಪಾಲದ ದಿ ಆಕಾಡೆಮಿ ಆಫ್ ಜನರಲ್ ಎಜ್ಯುಕೇಶ್‌ನ್‌ನ ಅಧ್ಯಕ್ಷ ಡಾ. ಎಚ್. ಎಸ್. ಬಲ್ಲಾಳ್ ಹೇಳಿದರು.


ಅವರು ಶುಕ್ರವಾರ ಮೂಡುಬಿದಿರೆ ಶ್ರೀ ಮಹಾವೀರ ಕಾಲೇಜು ಸ್ಥಾಪಕರ ದಿನಾಚರಣೆ ಮತ್ತು ಕಾಲೇಜು ವಾರ್ಷೀಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಕಾಲೇಜಿನ ಸಾಧಕ ವಿದ್ಯಾರ್ಥಿಗಳು ಮುಂದೆ ವಿದ್ಯಾರ್ಥಿಗಳಾಗುವವರಿಗೆ ಮಾದರಿಯಾಗುತ್ತಾರೆ ಎಂದು ವಿ. ವಿ. ರ್‍ಯಾಂಕ್ ವಿಜೇತ ವಿದ್ಯಾರ್ಥಿಗಳನ್ನು ಉಲ್ಲೇಖಿಸಿ ಮಾತನಾಡಿದರು.


ಅದಾನಿ ಸಮೂಹದ ಕಾರ್ಯಕಾರಿ ನಿರ್ದೇಶಕ ಮತ್ತು ಅಧ್ಯಕ್ಷ ಕಿಶೋರ್ ಆಳ್ವ ಮುಖ್ಯ ಅತಿಥಿಯಾಗಿ ಭಾಗವಹಿಸಿ ಸಮಾಜದ ಅಭ್ಯುದಯಕ್ಕೆ ಉತ್ತಮ ರೀತಿಯ ಕೊಡುಗೆಗಳನ್ನು ನೀಡಲು ಅದಾನಿ ಸಮೂಹ ಕಟಿಬದ್ಧವಾಗಿದೆ. ಈಗಾಗಲೇ ತನ್ನ ಲಾಭದ ಶೇ. 10ರಷ್ಟನ್ನು ಸಮಾಜದ ಪ್ರಗತಿಗಾಗಿ ನೀಡುತ್ತಿದೆ ಎಂದು ಹೇಳಿದರು.



 ಮಹಾವೀರ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಕೆ. ಅಭಯಚಂದ್ರ ಜೈನ್ ಮಾತನಾಡಿ ಮಣಿಪಾಲ ಸಮೂಹ ಸಂಸ್ಥೆಗಳು ಶಿಕ್ಷಣ ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿ ನೀಡಿದ ಕೊಡುಗೆಯನ್ನು ಸ್ಮರಿಸಿದರು.


ಸುಮಾರು 40 ವರ್ಷಗಳ ಕಾಲ ಗ್ರಂಥಾಲಯದಲ್ಲಿ ಸಹಾಯಕಿಯಾಗಿ ಗ್ರಂಥಪಾಲಕರಾಗಿ ಸೇವೆಗೈದು ನಿವೃತ್ತಿಯಾಗುತ್ತಿರುವ  ನಳಿನಿ ಕೆ. ಅವರನ್ನು ಪತಿ ವೆಂಕಟೇಶ್ವರ ಉಪಾಧ್ಯಾಯ ಸಹಿತ ಗೌರಸಿ ಬೀಳ್ಕೊಡಲಾಯಿತು.

ನಳಿನಿ ಅವರು ಕಾಲೇಜಿನ ಉಚಿತ ಭೋಜನ ನಿಧಿಗೆ ರೂ. 50ಸಾವಿರದ ಚೆಕ್ ನ್ನು ಹಸ್ತಾಂತರಿಸಿದರು. ಮಂಗಳೂರು ವಿವಿಯಲ್ಲಿ ಪದವಿ 2ನೇ ರ್‍ಯಾಂಕ್ ಪಡೆದ ಕಾಲೇಜು ವಿದ್ಯಾರ್ಥಿ ರಿಶಲ್ ಫೆರ್ನಾಂಡೀಸ್ ಹಾಗೂ 75 ಹುಟ್ಟುಹಬ್ಬ ಆಚರಸಿಕೊಳ್ಳುತ್ತಿರುವ ಕೆ. ಅಭಯಚಂದ್ರ ಜೈನ್‌ರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.


ಕಾಲೇಜಿನ ಆಡಳಿತ ಮಂಡಳಿ ಉಪಾಧ್ಯಕ್ಷ ಎಸ್. ಡಿ. ಸಂಪತ್ ಸಾಮ್ರಾಜ್ಯ, ಪ್ರಾಂಶುಪಾಲರಾದ ಡಾ. ರಾಧಕೃಷ್ಣ ಶೆಟ್ಟಿ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಮೇಶ್ ಭಟ್, ಕ್ಷೇಮಪಾಲನಾಧಿಕಾರಿ ಹರೀಶ್, ಪೋಷಕ ಶಿಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ರೆಹಮಾನ್, ವಿದ್ಯಾರ್ಥಿ ನಾಯಕ ನಿತಿನ್ ಸುವರ್ಣ ವೇದಿಕೆಯಲ್ಲಿದ್ದರು.


ಉಪನ್ಯಾಸಕ ಡಾ. ಪ್ರವೀಣ್ ಸ್ವಾಗತಿಸಿದರು. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಯಿತು.

ಡಾ. ಚಿನ್ನುಸ್ವಾಮಿ ಧನ್ಯವಾದವಿತ್ತರು. ರಕ್ಷಿತಾ ಕಾರ್ಯಕ್ರಮ ನಿರೂಪಿಸಿದರು.


ಮಹಾವೀರ ಕಾಲೇಜು ಸಮೂಹ ಸಂಸ್ಥೆಗಳ ಪ್ರಾಂಶುಪಾಲರು, ಆಡಳಿತ ಮಂಡಳಿ ಸದಸ್ಯರುಗಳು, ನಿವೃತ್ತ ಉಪನ್ಯಾಸಕರುಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.

Post a Comment

0 Comments