ಮತದಾನ ಆಂದೋಲನ: ಬೃಹತ್ ಕಾಲ್ನಡಿಗೆ ಜಾಥಾಕ್ಕೆ ಚಾಲನೆ
ಮೂಡುಬಿದಿರೆ: ಸಾರ್ವಜನಿಕರಿಗೆ ಮತದಾನದ ಅರಿವು ಮೂಡಿಸುವ ನಿಟ್ಟಿನಲ್ಲಿ ಭಾರತ ಚುನಾವಣಾ ಆಯೋಗ, ದಕ್ಷಿಣ ಕನ್ನಡ ಜಿಲ್ಲಾ ಸ್ವೀಪ್ ಸಮಿತಿ, ಸಾರ್ವತ್ರಿಕ ಲೋಕಸಭಾ ಚುನಾವಣೆ-2024 ಮೂಡುಬಿದಿರೆ ತಾಲೂಕು ಪಂಚಾಯತ್, ತಾಲೂಕು ಕಚೇರಿ, ಮೂಡುಬಿದಿರೆ ಹಾಗೂ ಮೈಟ್ ಇಂಜಿನಿಯರಿಂಗ್ ಕಾಲೇಜು ಮೂಡುಬಿದಿರೆ ಇವುಗಳ ಸಹಯೋಗದಲ್ಲಿ ಮೂಡುಬಿದಿರೆ ಪೇಟೆಯಲ್ಲಿ ಗುರುವಾರ ಬೆಳಿಗ್ಗೆ ಕಾಲ್ನಡಿಗೆ ಜಾಥಾ ನಡೆಯಿತು.
ಮೂಡುಬಿದಿರೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಎಸ್. ವೆಂಕಟಾಚಲಪತಿ, ಪೋಲಿಸ್ ನಿರೀಕ್ಷಕ ನಿತ್ಯಾನಂದ ಪಂಡಿತ್ ಹಾಗೂ ಮೈಟ್ ಕಾಲೇಜಿನ ಪ್ರಾಂಶುಪಾಲ ಪ್ರಶಾಂತ್ ಸಿ.ಎಂ. ಅವರು ಹಸಿರು ನಿಶಾನೆ ತೋರಿಸುವ ಮೂಲಕ ಜಾಥಾಕ್ಕೆ ಚಾಲನೆ ನೀಡಿದರು.
ಮೈಟ್ ಕಾಲೇಜು ಪ್ರಾಂಶುಪಾಲರಾದ ಪ್ರಶಾಂತ್ ಸಿ.ಎಂ ಅವರು ಚೊಚ್ಚಲ ಮತದಾನ ಮಾಡುವ ವಿದ್ಯಾರ್ಥಿನಿಯರಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡಿ, ಮತದಾನ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ, ಆದ್ದರಿಂದ ನಾವು ಜನರಿಗೆ ಮತದಾನದ ಜಾಗೃತಿಯನ್ನು ಕಾಲ್ನಡಿಗೆ ಜಾಥದ ಮೂಲಕ ಅರಿವು ಮೂಡಿಸುವ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಮತದಾನ ಮಾಡುವ ಮೂಲಕ ಉತ್ತಮ ನಾಯಕನ ಆಯ್ಕೆಯಾಗಲಿ ಎಂದರು.
ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟಾಚಲಪತಿ ಅವರು ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಕಟ್ಟಿಕೊಂಡು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ. ತಮ್ಮ ಮೊದಲ ಮತದಾನದ ಮೂಲಕ ಸಮಾಜಕ್ಕೆ ಉತ್ತಮ ನಾಯಕನನ್ನು ಆಯ್ಕೆ ಮಾಡಿ ಎಂದರು.
ಮೂಡುಬಿದಿರೆ ತಾಲೂಕು ಪಂಚಾಯತ್ ಆವರಣದಿಂದ ಹೊರಟು ಕಾಲ್ನಡಿಗೆ ಜಾಥಾವು ಪುರಸಭೆ ಮುಂಭಾಗದಿಂದ ತೆರಳಿ ಸ್ವರಾಜ್ಯ ಮೈದಾನದ ಬಳಿಯಿಂದ ಆಳ್ವಾಸ್ ಹೆಲ್ತ್ ಸೆಂಟ್ರರ್ ಮೂಲಕ ನಿಶ್ಮಿತಾ ಟವರ್ ಮುಂಭಾಗದಿಂದ ಮೂಡುಬಿದಿರೆ ಮೂಖ್ಯ ಪೇಟೆಗೆ ತಲುಪಿ ಹನುಮಾನ್ ದೇವಸ್ಥಾನದ ಮೂಲಕ ಹಳೆ ಪೋಲಿಸ್ ಠಾಣೆಯಿಂದ ಹಿಂತಿರುಗಿ ಅಮರಶ್ರೀ ಮೂಲಕ ಮರಳಿ ಬಂದು ಮೂಡುಬಿದಿರೆ ತಾಲೂಕು ಪಂಚಾಯತ್ ನಲ್ಲಿ ಸಮಾಪನಗೊಂಡಿತು.
ಪಂಚಾಯತ್ ಸಿಬ್ಬಂದಿಗಳಾದ ರಾಕೇಶ್ ಹಾಗೂ ಪ್ರಶಾಂತ್ ಅವರು ಮತದಾನದ ಮಾಹಿತಿಯನ್ನು ಸ್ವಚ್ಚತಾ ವಾಹಿನಿಯ ಮೂಲಕ ನೀಡಿದರು. ಸಹಾಯಕ ನಿರ್ದೇಶಕರಾದ ಸಾಯಿಶ ಚೌಟ ಅವರು ಕಾರ್ಯಕ್ರಮ ನಿರೂಪಿಸಿದರು.
ಜಾಥಾದಲ್ಲಿ ಮೈಟ್ ಕಾಲೇಜಿನ ದೈ.ಶಿ. ಉಪನ್ಯಾಕರಾದ ಶಮಿತ್ ರಾವ್, ಪೋಲಿಸ್ ಠಾಣಾ ಸಿಬ್ಬಂದಿಗಳು, ಗ್ರಾಮ ಪಂಚಾಯತ್ ಸಿಬ್ಬಂದಿಗಳು, ತಾಲೂಕು ಪಂಚಾಯತ್ ಸಿಬ್ಬಂದಿಗಳು, ಗೃಂಥಾಲಯ ಮೇಲ್ವಿಚಾರಕರು, ಸಂಜೀವಿನಿ ಒಕ್ಕೂಟದ ಸಿಬ್ಬಂದಿಗಳು ಹಾಗೂ ಮೈಟ್ ಕಾಲೇಜು ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು, ಗ್ರಾಮ ಪಂಚಾಯತ್ ಸ್ವಚ್ಚತಾ ವಾಹನಗಳು ಸೇರಿದಂತೆ ಜಾಥಾದಲ್ಲಿ ಪಾಲ್ಗೊಂಡಿದ್ದರು.
ವಿದ್ಯಾರ್ಥಿಗಳನ್ನು ಸ್ವೀಪ್ -2024 ರಂತೆ ನಿಲ್ಲಿಸಿ, ಮತದಾನ ಜಾಗೃತಿ ಮೂಡಿಸಲಾಯಿತು.
ಇದೇ ಸಂದರ್ಭದಲ್ಲಿ ಸಹಿ ಅಭಿಯಾನದಡಿ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರಿಂದ ಸಹಿಯನ್ನು ಪಡೆಯಲಾಯಿತು.
0 Comments