ಮೂಡುಬಿದಿರೆಯಿಂದ ವೇಣೂರುವರೆಗೆ ಸ್ವಚ್ಛತಾ ಅಭಿಯಾನ ಕೈಗೊಂಡ ಎಕ್ಸಲೆಂಟ್ ವಿದ್ಯಾ ಸಂಸ್ಥೆ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆಯಿಂದ ವೇಣೂರುವರೆಗೆ ಸ್ವಚ್ಛತಾ ಅಭಿಯಾನ ಕೈಗೊಂಡ ಎಕ್ಸಲೆಂಟ್ ವಿದ್ಯಾ ಸಂಸ್ಥೆ



ಮೂಡುಬಿದಿರೆ: ಸ್ವಚ್ಚ ಸಮಾಜದೆಡೆ ನಮ್ಮ ನಡೆ ಎಂಬ ಸ್ವಾಸ್ಥ್ಯ ಸಂಕಲ್ಪ ಮತ್ತು ಸ್ವಚ್ಛತಾ ಅಭಿಯಾನದಡಿ ಇಲ್ಲಿನ ಪುರಸಭೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಇವುಗಳ ಸಹಯೋಗದಲ್ಲಿ ಕಲ್ಲಬೆಟ್ಟುವಿನ ಎಕ್ಸಲೆಂಟ್ ವಿದ್ಯಾ ಸಂಸ್ಥೆಯು ಮೂಡುಬಿದಿರೆಯಿಂದ ವೇಣೂರುವರೆಗೆ ಶನಿವಾರ ಸ್ವಚ್ಛತಾ ಅಭಿಯಾನವನ್ನು ಕೈಗೊಂಡಿತು.

  ವೇಣೂರು ಭಗವಾನ್ ಶ್ರೀ ಬಾಹುಬಲಿ ಮಹಾಮಸ್ತಕಾಭಿಷೇಕದ ಸುಸಂದರ್ಭದಲ್ಲಿ ನಡೆಯುವ ಈ ಸ್ವಚ್ಛತಾ ಅಭಿಯಾನಕ್ಕೆ ಎಂಸಿಎಸ್ ಬ್ಯಾಂಕಿನ ಅಧ್ಯಕ್ಷ, ಸಹಕಾರ ರತ್ನ ಎಂ.ಬಾಹುಬಲಿ ಪ್ರಸಾದ್ ಮೆಸ್ಕಾಂ ಕಛೇರಿ ಮುಂಭಾಗ ಚಾಲನೆಯನ್ನು ನೀಡಿ ಮಾತನಾಡಿ ಪ್ರಪಂಚದಲ್ಲಿ ಅತೀ ದೊಡ್ಡ ಸ್ವಚ್ಛತಾ ಅಭಿಯಾನ ನಡೆದದ್ದು ಅದು ಭಾರತ ದೇಶದಲ್ಲಿ. ಹಿಂದೆ ನಾವು ಸ್ವಚ್ಛತೆಯ ಬಗ್ಗೆ ಮಕ್ಕಳಿಗೆ ಹೇಳುತ್ತಿದ್ದೆವು ಆದರೆ ಇಂದು ಮಕ್ಕಳು ಹಿರಿಯರಿಗೆ ಹೇಳುವಷ್ಟರ ಮಟ್ಟಿಗೆ ಜಾಗೃತರಾಗಿದ್ದಾರೆ. ಎಕ್ಸಲೆಂಟ್ ಸಂಸ್ಥೆಯು ಸದಾ  ಸ್ವಚ್ಚತೆಗೆ ಆದ್ಯತೆಯನ್ನು ನೀಡುತ್ತಾ ಬರುತ್ತಿದೆ.ಇದೀಗ ವೇಣೂರಿನಲ್ಲಿ ನಡೆಯುವ  ಮಹಾಮಸ್ತಕಾಭೀಷಕಕ್ಕೆ  ಪೂರಕವಾಗಿ ಬೆಳ್ತಂಗಡಿ ಮತ್ತು ಮೂಡುಬಿದಿರೆ ತಾಲೂಕುಗಳನ್ನು ಸೇರಿಸಿ ಈ ಸ್ವಚ್ಛತಾ ಅಭಿಯಾನವನ್ನು ಕೈಗೊಂಡಿರುವುದು ಶ್ಲಾಘನೀಯ ಎಂದರು. 

  ಎಕ್ಸಲೆಂಟ್‌ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

  ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್, ಮೂಡುಬಿದಿರೆ ಜೈನ್ ಮಿಲನ್ ನ ಅಧ್ಯಕ್ಷ ಆನಡ್ಕ  ದಿನೇಶ್ ಕುಮಾರ್, ರೋಟರಿ ಕ್ಲಬ್ ಟೆಂಪಲ್ ಟೌನ್ ನ ಅಧ್ಯಕ್ಷ ರೋನಿ ಫೆರ್ನಾಂಡಿಸ್, ಲಯನ್ಸ್ ಕ್ಲಬ್ ನ ಅಧ್ಯಕ್ಷ ಜೊಸ್ಸಿ ಮಿನೇಜಸ್, ಪ್ರೆಸ್ ಕ್ಲಬ್ ಅಧ್ಯಕ್ಷ ಯಶೋಧರ ವಿ.ಬಂಗೇರ, ನೋಟರಿ ಶ್ವೇತಾ ಜೈನ್, ಸಂಸ್ಥೆಯ ಎಒ ಹರೀಶ್ ಶೆಟ್ಟಿ, ಪಿಆರ್ ಒ ಚೈತ್ರಾ ರೈ,  ಮತ್ತಿತರರು ಉಪಸ್ಥಿತರಿದ್ದರು.

  ಉಪನ್ಯಾಸಕ ಡಾ. ವಾದಿರಾಜ ಕಲ್ಲೂರಾಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Post a Comment

0 Comments