ಆಳ್ವಾಸ್ ನಲ್ಲಿ 75ನೇ ವರ್ಷದ ಗಣರಾಜ್ಯೋತ್ಸವ ಆಚರಣೆ
* ಸಂಸ್ಕೃತಿ ಬಿಂಬಿಸುವ ಮಿನಿ ಭಾರತ ಆಳ್ವಾಸ್ : ಯು.ಟಿ.ಖಾದರ್
ಮೂಡುಬಿದಿರೆ: ಭಾರತದ ಸಂಸ್ಕೃತಿಯ ಸಾರವನ್ನು ನಾವು ಕರ್ನಾಟಕದಲ್ಲಿ ಕಾಣಬಹುದು. ಆದರೆ, ಕರ್ನಾಟಕದ ಸಾಂಸ್ಕೃತಿಕ ಸಾರವನ್ನು ನಾವೆಲ್ಲ ಆಳ್ವಾಸ್‌ನಲ್ಲಿ ನೋಡಬೇಕು. ಆಳ್ವಾಸ್ ನಮ್ಮ ಸಂಸ್ಕೃತಿ ಬಿಂಬಿಸುವ ಮಿನಿ ಭಾರತ ಎಂದು ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಹೇಳಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ವಿದ್ಯಾಗಿರಿ ಆವರಣದ ಶ್ರೀಮತಿ ವನಜಾಕ್ಷಿ ಶ್ರೀಪತಿ ಭಟ್ ವೇದಿಕೆಯಲ್ಲಿ ಹಮ್ಮಿಕೊಂಡ 75ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ರೈತರು, ಶೋಷಿತರು, ಬಡವರು ಸೇರಿದಂತೆ ದೇಶದ ಧ್ವನಿ ರಹಿತರೆಲ್ಲ ಇಷ್ಟೊಂದು ಧೈರ್ಯದಿಂದ ಈ ದೇಶದಲ್ಲಿ ಜೀವಿಸಲು ಕಾರಣವೇ ಡಾ.ಬಿ.ಆರ್. ಅಂಬೇಡ್ಕರ್ ಪ್ರಣೀತ ಸಂವಿಧಾನ. ದೇಶದ ಏಕತೆಯನ್ನು ಸಂವಿಧಾನ ಉಳಿಸಿದೆ. ಪ್ರತಿ ಭಾರತೀಯನೂ ಈ ಸಂವಿಧಾನದ ಇತಿಹಾಸ, ಅರ್ಥ ತಿಳಿದುಕೊಳ್ಳಬೇಕು ಎಂದರು.
ಆಳ್ವಾಸ್ ಆವರಣವೇ ಮಿನಿ ಭಾರತದ ಹಾಗಿದೆ. ಪ್ರದೇಶ, ಭಾಷೆ, ಜಾತಿ, ಧರ್ಮಗಳನ್ನು ಮೀರಿ ಎಲ್ಲ ಮಕ್ಕಳು ಒಂದಾಗಿದ್ದೀರಿ. ವಿದ್ಯಾರ್ಥಿಗಳು ಬಲಿಷ್ಠರಾದರೆ ಮಾತ್ರ ದೇಶ ಬಲಿಷ್ಠವಾಗಲು ಸಾಧ್ಯ. ಅಂತಹ ದೇಶಭಕ್ತಿಯ ಕೆಲಸವನ್ನು ಡಾ.ಎಂ. ಮೋಹನ ಆಳ್ವ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ, ಮಾಜಿ ಸಚಿವರಾದ ಪಿಪಿ.ಜಿ.ಆರ್. ಸಿಂಧ್ಯಾ, ನಾಗರಾಜ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಎಸ್. ಎಲ್. ಭೋಜೇಗೌಡ, ಸುಮಾರು 250ಕ್ಕೂ ಅಧಿಕ ಮಾಜಿ ಸೈನಿಕರು ಪಾಲ್ಗೊಂಡಿದ್ದರು.
ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರಿಗೆ ಎನ್‌ಸಿಸಿ ಸೀನಿಯರ್ ಅಂಡರ್ ಆಫೀಸರ್ ಇಂದ್ರೇಶ್ ಗೌಡ ನೇತೃತ್ವದಲ್ಲಿ ಗೌರವ ರಕ್ಷೆ ನೀಡಲಾಯಿತು. ಬಳಿಕ ಎನ್‌ಸಿಸಿ ಸೀನಿಯರ್ ಅಂಡರ್ ಆಫೀಸರ್ ಹರ್ಷಾರೆಡ್ಡಿ ನೇತೃತ್ವದಲ್ಲಿ ಗೌರವ ವಂದನೆ ನೀಡಲಾಯಿತು. ಸಿಡಿಮದ್ದು ಸಿಂಚನವು ಗಮನ ಸೆಳೆಯಿತು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ ಪ್ರತಿ ವರ್ಷ ನಡೆಯುವ ಗಣರಾಜ್ಯೋತ್ಸವವು ಇತರ ಕಡೆಗಿಂತ ವಿಭಿನ್ನವಾಗಿದ್ದು, ಶುಕ್ರವಾರ ಕೂಡ ತ್ರಿವರ್ಣದಿಂದ ಕಂಗೊಳಿಸಿತ್ತು. ರಾಷ್ಟ್ರಗೀತೆ ಜನ ಗಣ ಮನದ ಬಳಿಕ ವಿದ್ಯಾರ್ಥಿಗಳು ಹಾಡಿದ ಕೋಟಿ ಕಂಠೋಂಸೇ ನಿಖ್‌ಲೇ... ಗಾನಕ್ಕೆ ಸೇರಿದ್ದ 30 ಸಾವಿರಕ್ಕೂ ಅಧಿಕ ಮಂದಿ ವಿದ್ಯಾರ್ಥಿಗಳು ಧ್ವಜಗಳನ್ನು ಬೀಸುತ್ತಾ ದನಿಗೂಡಿಸಿದರು. ವಿದ್ಯಾರ್ಥಿಗಳ ನಡುವೆ ತ್ರಿವರ್ಣದಲ್ಲಿ `ಆಳ್ವಾಸ್' ಎಂದು ಇಂಗ್ಲೀಷ್ ಅಕ್ಷರಗಳಲ್ಲಿ ಚಿತ್ರಿಸಲಾಗಿದ್ದು ಗಮನಸೆಳೆಯಿತು.
0 Comments