ಮೂಡುಬಿದಿರೆ : ತಾಲೂಕು ಆಡಳಿತ ಸೌಧದಲ್ಲಿ 75 ನೇ ಗಣರಾಜ್ಯೋತ್ಸವ ಆಚರಣೆ
*ಸಾಧಕ ವಿದ್ಯಾರ್ಥಿಗಳಿಗೆ ಮತ್ತು ಕೃಷಿಕರಿಗೆ ಸನ್ಮಾನ
ಮೂಡುಬಿದಿರೆ ತಾಲೂಕು ರಾಷ್ಟ್ರೀಯ ತಾಲೂಕು ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ತಾಲೂಕು ಆಡಳಿತ ಸೌಧದ ಮುಂಭಾಗ 75ನೇ ವರ್ಷದ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.
ಮಂಗಳೂರು ತಹಶೀಲ್ದಾರ್ ಎಂ.ಎ.ಚೌಧುರಿ ಧ್ವಜವನ್ನು ಅರಳಿಸಿ, ಪಥ ಸಂಚಲನದ ಗೌರವ ರಕ್ಷೆಯನ್ನು ಸ್ವೀಕರಿಸಿ ಮಾತನಾಡಿ ಭಾರತ ದೇಶವು ಸಾರ್ವಭೌಮ, ಸಮಾಜವಾದಿ,ಜಾತ್ಯಾತೀತ ಮತ್ತು ಪ್ರಜಾಸತ್ತಾತ್ಮಕ ಗಣರಾಜ್ಯವಾಗಿದ್ದು ತನ್ನ ನಾಗರಿಕತೆಗೆ ಸಮಾನತೆ, ಸ್ವಾತಂತ್ರ್ಯ ಮತ್ತು ತತ್ವಗಳನ್ನು ನೀಡುತ್ತದೆ. ನಮ್ಮ ಅದ್ಭುತ ಸಂವಿಧಾನವು ನಮಗೆ ನೀಡಿದ ಮೂಲಭೂತ ತತ್ವಗಳನ್ನು ಮತ್ತು ಮೌಲ್ಯಗಳನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳಾದ ಡ್ರಾಮ ಜ್ಯೂನಿಯರ್ ನಲ್ಲಿ ಮಿಂಚುತ್ತಿರುವ ತಂಡ್ರಕೆರೆಯ ಬಾಲಕ ಅಭೀಷ್ ಪೂಜಾರಿ,ಸ್ವಾತಂತ್ರದ ಅಮೃತ ಮಹೋತ್ಸವದ ಸವಿ ನೆನಪಿಗಾಗಿ ಸರಕಾರದ ಆದೇಶದಂತೆ " ನನ್ನ ಮಣ್ಣು ನನ್ನ ದೇಶ" ಅಭಿಯಾನದಡಿ ಮುಲ್ಕಿ ಪ್ರದೇಶದ ಪವಿತ್ರ ಮಣ್ಣನ್ನು ಅಮೃತ ಕಲಶದಲ್ಲಿ ಸಂಗ್ರಹಿಸಿ ನವ ದೆಹಲಿಯಲ್ಲಿ ನಡೆದ "ಅಮೃತ ವಾಟಿಕಾ" ಕಾರ್ಯಕ್ರಮಕ್ಕೆ ತಲುಪಿಸಿ ಪುರಸಭೆಯ ಪ್ರತಿನಿಧಿಯಾಗಿ ರಾಷ್ಟ್ರಮಟ್ಟದಲ್ಲಿ ಭಾಗವಹಿಸಿರುವ ಜೈನ ಪ.ಪೂ.ಕಾಲೇಜಿನ ವಿದ್ಯಾರ್ಥಿ ಸಾಯಿನಾಥ ಪೂಜಾರಿ ಹಾಗೂ ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಯನ್ನು ಪಡೆದಿರುವ ಬೆಳುವಾಯಿಯ ಪ್ರೇಮಾ ಹೆಗ್ಡೆ( ಸಮಗ್ರ ಕೃಷಿ ಪದ್ಧತಿ), ಪುಚ್ಚಮೊಗರುವಿನ ಐರಿನ್ ಲೋಬೋ(ತೋಟಗಾರಿಕೆ), ಮೂಡುಕೊಣಾಜೆಯ ವಿಜಯ ಮೇಸ್ತ್ರಿ( ಪಶುಸಂಗೋಪನೆ) ಅವರನ್ನು ಸನ್ಮಾನಿಸಲಾಯಿತು.
ಮೂಡುಬಿದಿರೆ ಠಾಣಾ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ, ಅಬಕಾರಿ ಇಲಾಖೆಯ ನಿರೀಕ್ಷಕ ಗಣಪತಿ ಪೈ, ಉಪ ನೋಂದಾವಣೆ ಅಧಿಕಾರಿ ರಘುರಾಮ ಪ್ರಸಾದ್ ಅತಿಥಿಗಳಾಗಿ ಭಾಗವಹಿಸಿದ್ದರು.
ಪುರಸಭಾ ಮುಖ್ಯಾಧಿಕಾರಿ ಇಂದು ಎಂ. ಸ್ವಾಗತಿಸಿದರು. ತಾಲೂಕು ದೈಹಿಕ ಶಿ.ಶಿ.ಪರಿವೀಕ್ಷಣಾಧಿಕಾರಿ ನಿತ್ಯಾನಂದ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ತಾಲೂಕು ಶಿಕ್ಷಣಾಧಿಕಾರಿ ವಿರೂಪಾಕ್ಷ ವಂದಿಸಿದರು.
ಪಥಸಂಚಲನ : ಪೊಲೀಸ್ ಇಲಾಖೆ, ಗೃಹರಕ್ಷಕ ದಳ, ಕಂದಾಯ ಇಲಾಖೆಯ ಸಿಬಂದಿಗಳು ಸಹಿತ ತಾಲೂಕಿನ ವಿವಿಧ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಪಥಸಂಚಲನದಲ್ಲಿ ಭಾಗವಹಿಸಿದ್ದರು.
0 Comments