ಮುಂದಿನ ತಿಂಗಳಿನಿಂದ ಯುವನಿಧಿ ಜಾರಿ, ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಯಂತ್ರದ ಸೌಲಭ್ಯ

ಜಾಹೀರಾತು/Advertisment
ಜಾಹೀರಾತು/Advertisment

 ಮುಂದಿನ ತಿಂಗಳಿನಿಂದ ಯುವನಿಧಿ ಜಾರಿ, ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಯಂತ್ರದ ಸೌಲಭ್ಯ


*ಮೂಡುಬಿದಿರೆಯಲ್ಲಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಸಚಿವ ಗುಂಡೂರಾವ್

ಮೂಡುಬಿದಿರೆ: ಜನರಿಗೆ ನೇರ ತಲುಪುವ ಸರ್ಕಾರದ ನಾಲ್ಕು ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿದ್ದು ಯುವನಿಧಿಯನ್ನು ಮುಂದಿನ ತಿಂಗಳಿನಿಂದ ಜಾರಿಗೊಳಿಸಲಾಗುವುದು ಮತ್ತು ಮೂಡುಬಿದಿರೆ ಹಾಗೂ ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರಗಳಿಗೆ ಡಯಾಲಿಸಿಸ್ ಯಂತ್ರಗಳು ಹಾಗೂ ಟೆಕ್ನಿಷಿಯನ್ ಗಳನ್ನು ಮುಂದಿನ ತಿಂಗಳೊಳಗೆ ಒದಗಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೆಳಿದರು.


ಅವರು ಮೂಡುಬಿದಿರೆ ತಾಲೂಕು ಆಡಳಿತ ಸೌಧದಲ್ಲಿ ಶುಕ್ರವಾರ  ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಿ  ಮಾತನಾಡಿದರು.

 

 ಮುಂದಿನ ತಿಂಗಳಿನಿಂದ ತಾಲೂಕುವಾರು ಜನಸ್ಪಂದನ ಸಭೆ ನಡೆಸಿ ಸ್ಥಳೀಯವಾದ ಸಣ್ಣಪುಟ್ಟ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುವುದು. ಜನಸಾಮಾನ್ಯರು ಸಲ್ಲಿಸುವ ಅರ್ಜಿಗಳು ಕಾಲಮಿತಿಯೊಳಗೆ ಇತ್ಯರ್ಥಗೊಳ್ಳಲು ಇದು ಸಹಕಾರಿಯಾಗಲಿದೆ.

ಕೋವಿಡ್ ಹಿನ್ನೆಲೆಯಲ್ಲಿ ಈಗಾಗಲೆ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಕ್ಯಾಬಿನೆಟ್ ಸಭೆ ನಡೆಸಿ ಮುನ್ನೆಚ್ಚರಿಕೆಯ ಕುರಿತು ಚರ್ಚಿಸಲಾಗಿದೆ. ಜನರು ಆತಂಕಕ್ಕೊಳಗಾಗುವ ಅಗತ್ಯವಿಲ್ಲ, ಈ ವರೆಗೆ ಯಾವುದೇ ನಿರ್ಬಂಧ ಹೇರಿಲ್ಲ. 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಮಾಸ್ಕ್ ಧರಿಸಿಕೊಳ್ಳುವಂತೆ ಮಾತ್ರ ಸೂಚಿಸಲಾಗಿದೆ ಎಂದರು. ಉಮಾನಾಥ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. 

ಪೇಟೆಯ ಹೃದಯಭಾಗದಲ್ಲಿ ಪುರಸಭೆ ಮಾರುಕಟ್ಟೆಯ ಕಾಮಗಾರಿ ಕಾನೂನು ತೊಡಗಿಕಿಂದಾಗಿ ಅರ್ಧದಲ್ಲೇ ನಿಂತಿದೆ. ಇದರಿಂದ ವ್ಯಾಪಾರಿಗಳಿಗೆ ಮಾತ್ರವಲ್ಲ ಜನರಿಗೂ ತೊಂದರೆಯಾಗುತ್ತಿದೆ ಎಂದು ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಸಚಿವರ ಗಮನಕ್ಕೆ ತಂದರು. ಈ ಕುರಿತು ಪರಿಶೀಲಿಸಿ, ಮಾರುಕಟ್ಟೆ ನಿರ್ಮಾಣಕ್ಕೆ ಪೂರಕವಾದ ಪ್ರಯತ್ನಗಳನ್ನು ಮಾಡುವಂತೆ ಸಚಿವರು ಜಿಲ್ಲಾಧಿಕಾರಿಯವರಿಗೆ ಸೂಚಿಸಿದರು. 

ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್, ಸಹಾಯಕ ಆಯುಕ್ತ ಹರ್ಷವರ್ಧನ್, ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್ ಉಪಸ್ಥಿತರಿದ್ದರು. ಉಪತಹಸೀಲ್ದಾರ್ ರಾಮ ಕೆ. ಫಲಾನುಭವಿಗಳ ವಿವರ ನೀಡಿದರು. ಒಟ್ಟು 109 ಮಂದಿಗೆ ಪಿಂಚಣಿ, 94ಸಿ, 94ಸಿಸಿಯಡಿ ಆದೇಶ ಪತ್ರ ವಿತರಿಸಲಾಯಿತು.

--------------

ಸಮುದಾಯದ ಆರೋಗ್ಯ ವಿಚಾರಿಸದ ಸಚಿವರು : 

 ಆರೋಗ್ಯ ಸಚಿವರು ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆಂಬ ಮಾಹಿತಿಯ ಮೇರೆಗೆ ಆರೋಗ್ಯಾಧಿಕಾರಿಗಳು, ಪೊಲೀಸ್ ಸಿಬಂಧಿಗಳು ಮತ್ತು ಪತ್ರಕರ್ತರು ಸರಕಾರಿ ಆಸ್ಪತ್ರೆಯ ಬಳಿಯಲ್ಲೇ ಕಾದು ಕುಳಿತುಕೊಂಡಿದ್ದರು. ಹಕ್ಕುಪತ್ರ ನೀಡಿದ ತಕ್ಷಣ ಖಾಸಗಿ ಕಾಲೇಜೊಂದರ ಕಾರ್ಯಕ್ರಮದಲ್ಲಿ ಭಾಗವಹಿಸಿ ಬರುವುದಾಗಿ ಭರವಸೆ ನೀಡಿ ತೆರಳಿದ್ದ ಸಚಿವರು ನಂತರ  ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡದೆ ಸೀದಾ ಮಂಗಳೂರು ಕಡೆಗೆ ಪ್ರಯಾಣ ಬೆಳೆಸುವ ಮೂಲಕ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಾದು ಕುಳಿತುಕೊಂಡಿದ್ದ ಅಧಿಕಾರಿ ವರ್ಗದವರು ಬೆಸ್ತು ಬೀಳುವಂತೆ ಮಾಡಿದರು.  

----------------

Post a Comment

0 Comments