ನ.22ರಂದು 'ಶಿಕ್ಷಣ ರತ್ನ' ಯುವರಾಜ್ ಜೈನ್ ಗೆ ಅಭಿನಂದನಾ ಸಮಾರಂಭ
ಮೊದಲು ಉಪನ್ಯಾಸಕನಾಗಿ ಉತ್ಕೃಷ್ಟವಾದ ಶಿಕ್ಷಣ ನೀಡುತ್ತಿದ್ದ ಯುವರಾಜ್ ಜೈನ್ ಅವರು ಕಳೆದ 11 ವರ್ಷಗಳಿಂದ ಶಿಕ್ಷಣ ಸಂಸ್ಥೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ಸಂಸ್ಥೆಯನ್ನು ರಾಜ್ಯ ರಾಷ್ಟ್ರಮಟ್ಟದಲ್ಲಿ ಬೆಳೆಸಿ ಸಮಾಜದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದ್ದಾರೆ. ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳ ಮೂಲಕವೂ ಸಮಾಜಮುಖಿಯಾಗಿ ಗುರುತಿಸಿಕೊಂಡಿರುವ ಅವರು ಮೂಡುಬಿದಿರೆ ಟೆಂಪಲ್ ಟೌನ್ ನ ಸ್ಥಾಪಕಾಧ್ಯಕ್ಷರಾಗಿ, ಜೇಸಿಯ ಅಧ್ಯಕ್ಷರಾಗಿ ಉತ್ತಮ ಕಾರ್ಯಗಳನ್ನು ಮಾಡುವ ಮೂಲಕ ರಾಷ್ಟ್ರೀಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು ವಿವಿಧ ಸಂಘ ಸಂಸ್ಥೆಗಳ ಗೌರವಕ್ಕೆ ಪಾತ್ರರಾಗಿದ್ದು ಈ ನಿಟ್ಟಿನಲ್ಲಿ ಅವರನ್ನು ಅಭಿನಂದಿಸಲಾಗುತ್ತಿದೆ.
ಎಕ್ಸಲೆಂಟ್ ಸಂಸ್ಥೆಯು ಈಗಾಗಲೇ ಹಲವಾರು ಜನರಿಗೆ, ಸಂಸ್ಥೆಗಳಿಗೆ ವಿದ್ಯಾರ್ಥಿಗಳಿಗೆ ಆರ್ಥಿಕವಾಗಿ, ವಸ್ತು ರೂಪದಲ್ಲಿ ಸಮಾಜಮುಖಿಯಾಗಿ ಸಹಕಾರವನ್ನು ನೀಡುತ್ತಾ ಬಂದಿದೆ ಇದೀಗ ಅಭಿನಂದನಾ ಸಮಾರಂಭದಲ್ಲಿ 'ಎಕ್ಸಲೆಂಟ್ ಸಹಾಯನಿಧಿಗೆ' ಚಾಲನೆ ನೀಡಲಾಗುವುದೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಜಿರೆ ಶ್ರೀ.ಧ.ಮಂ.ಶಿ.ಸಂಸ್ಥೆ(ರಿ) ಇದರ ಕಾರ್ಯದರ್ಶಿ ಹರ್ಷೇಂದ್ರ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಕಾರ್ಕಳ ಜೇಸಿ ರಾಷ್ಟ್ರೀಯ ತರಬೇತುದಾರ ರಾಜೇಂದ್ರ ಭಟ್ ಕೆ. ಅಭಿನಂದನಾ ನುಡಿಗಳನ್ನಾಡಲಿದ್ದಾರೆ. ಶಾಸಕ ಉಮಾನಾಥ ಕೋಟ್ಯಾನ್ ಶುಭಾಂಶನೆಗೈಯ್ಯಲಿದ್ದಾರೆ. ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಉಪಸ್ಥಿತರಿರುವರು ಎಂದು ಸಂಸ್ಥೆಯ ಆಡಳಿತ ನಿರ್ದೇಶಕ ಸಂಪತ್ ಕುಮಾರ್ ಜೈನ್ ತಿಳಿಸಿದರು.
ಪಿಆರ್ ಒ ಚೈತ್ರಾ ರೈ, ಕನ್ನಡ ಉಪನ್ಯಾಸಕ ವಾದಿರಾಜ ಕಲ್ಲೂರಾಯ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
0 Comments