ಮೂಡುಬಿದಿರೆ ಶ್ರಿಗಳ ಪಟ್ಟಾಭಿಷೇಕಕ್ಕೆ ೨೫ ರ ಸಂಭ್ರಮ : ವಿವಿಧ ಅಭಿವೃದ್ಧಿ ಕಾರ್ಯಗಳೊಂದಿಗೆ ಆಚರಣೆ
ಮೂಡುಬಿದಿರೆ: ಇಲ್ಲಿನ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಅವರಿಗೆ ಪಟ್ಟಾಭಿಷೇಕವಾಗಿ ೨೫ನೇ ವರ್ಷ ತುಂಬುವ ಈ ಹಿನ್ನಲೆಯಲ್ಲಿ ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಜೈನಮಠವು ಯೋಜನೆ ರೂಪಿಸಿದೆ.
ಗುರುವಾರ ಜೈನಮಠದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಮಾತನಾಡಿ ಸಿದ್ಧಾಂತ ಮಂದಿರದ ಕಾಮಗಾರಿಯನ್ನು ಪೂರ್ಣಗೊಳಿಸಿ ಶೀಘ್ರದಲ್ಲೇ ಲೋಕಾರ್ಪಣೆಗೊಳಿಸಲಾಗುವುದು. ಸಾವಿರಕಂಬದ ಬಸದಿಯ ಆವರಣಕ್ಕೆ ೧.೭೦ ಕೊಟಿ ವೆಚ್ಚದಲ್ಲಿ ಹಾಸುಗಲ್ಲು ಅಳವಡಿಸಲು ಯೋಜನೆ ರೂಪಿಸಲಾಗಿದೆ. ಅತಿಥಿಗೃಹದ ಕಾಮಗಾರಿ ನಡೆಯುತ್ತಿದ್ದು ಅದನ್ನು ಸಂಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸಲಾಗುವುದು. ಜಿನಮಂದಿರಗಳ ಜೀರ್ಣೋದ್ಧಾರಕ್ಕೂ ಯೋಜನೆ ರೂಪಿಸಲಾಗುವುದು.
ವರ್ಷಪೂರ್ತಿ ವೈವಿಧ್ಯಮಯ ಭಾರತೀಯ ಧರ್ಮ ಸಂಸ್ಕೃತಿಗೆ ಸಂಬಂಧಪಟ್ಟ ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಪ್ರಥಮ ಕಾರ್ಯಕ್ರಮಕ್ಕೆ ಸೆ.16ರಂದು ಶ್ರೀ ಮಠದ ಬಳಿ ಇರುವ ರಮಾ ರಾಣಿ ಶೋಧ ಸಂಸ್ಥಾನ ಭಟ್ಟಾರಕ ಸಭಾಭವನದಲ್ಲಿ ಚಾಲನೆ ದೊರೆಯಲಿದೆ ಎಂದು ತಿಳಿಸಿದರು.
ನ್ಯಾಯವಾದಿ ಬಾಹುಬಲಿ ಪ್ರಸಾದ್ ಮಾತನಾಡಿ ಭಟ್ಟಾರಕ ಶ್ರೀಗಳು ಪಟ್ಟಾಭಿಷೇಕವಾದ ಬಳಿಕ ಹತ್ತು ಹಲವು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸ್ವಸ್ತಿಶ್ರೀ ಪಿಯು ಕಾಲೇಜು ತೆರೆಯುವ ಮೂಲಕ ಬಡ ಮತ್ತು ಕಲಿಕೆಯಲ್ಲಿ ಹಿಂದುಳಿದವರಿಗೆ ಅವಕಾಶ ಕಲ್ಪಿಸಿದ್ದಾರೆ. ದೇಶವಿದೇಶಗಳಲ್ಲಿ ಹಲವು ಬಸದಿಗಳಲ್ಲಿ ಪಂಚಕಲ್ಯಾಣ ಕಾರ್ಯಕ್ರಮಗಳು ಇವರ ನೇತೃತ್ವದಲ್ಲಿ ನಡೆದಿದೆ. ಅಹಿಂಸೆ ಮತ್ತು ಸಸ್ಯಹಾರಕ್ಕೆ ಒತ್ತುಕೊಟ್ಟು ಸುಮಾರು ೪೦೦ಕ್ಕೂ ಅಧಿಕ ಮಂದಿಗೆ ಸಸ್ಯಹಾರದ ದೀಕ್ಷೆ ನೀಡಿದ್ದಾರೆ. ಪ್ರತೀ ವರ್ಷವು ಯಕ್ಷಗಾನ ತಾಳಮದ್ದಳೆಯನ್ನು ನಡೆಸಿ ಕಲೆಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ ಎಂದರು. ಬಸದಿಗಳ ಮೊಕ್ತೇಸರರಾದ ಪಟ್ನಶೆಟ್ಟಿ ಸುಧೇಶ್ ಕುಮಾರ್, ಆನಡ್ಕ ದಿನೇಶ್ ಕುಮಾರ್, ಮಠದ ವ್ಯವಸ್ಥಾಪಕರಾದ ಸಂಜಯಂತ ಕುಮಾರ್ ಉಪಸ್ಥಿತರಿದ್ದರು.
0 Comments