ಮೂಡುಬಿದಿರೆ: ಬ್ರಹ್ಮಶ್ರೀ ನಾರಾಯಣಗುರುಗಳ 169ನೇ ಜನ್ಮ ದಿನಾಚರಣೆ
ಮೂಡುಬಿದಿರೆ: ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ(ರಿ.) ಶ್ರೀ ನಾರಾಯಣ ಗುರು ಸೇವಾದಳ ಹಾಗೂ ಶ್ರೀ ನಾರಾಯಣಗುರು ಮಹಿಳಾ ಘಟಕ ಮೂಡುಬಿದಿರೆ ಇದರ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 169 ನೇ ಜನ್ಮ ದಿನಾಚರಣೆ ಹಾಗೂ ಸಂಘದ 73ನೇ ಮತ್ತು ಮೂರ್ತಿ ಪ್ರತಿಷ್ಠಾಪನೆಯ 37ನೇ ವಾರ್ಷಿಕೋತ್ಸವ ಸಮಾರಂಭವು ಬಿಲ್ಲವ ಸಂಘದ ಕಾಮಧೇನು ಸಭಾಭವನದಲ್ಲಿ ಭಾನುವಾರ ನಡೆಯಿತು.
ಶಾಸಕ ಉಮಾನಾಥ ಎ.ಕೋಟ್ಯಾನ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ನಿರಂತರ ಸೇವೆ ಮತ್ತು ಪರಿಶ್ರಮದಿಂದ ಯಶಸ್ಸು ಸಾಧ್ಯ. ಉತ್ತಮ ಅಂಕಗಳನ್ನು ಗಳಿಸುವುದು ಮಾತ್ರ ಸಾಧನೆಯಲ್ಲ ಬದಲಾಗಿ ಜೀವನದಲ್ಲಿ ಬದುಕಲು ಬೇಕಾಗುವ ಶಿಕ್ಷಣ ಪಡೆದುಕೊಳ್ಳಬೇಕಾಗಿದೆ ಎಂದರು.
ಮಂಗಳೂರು ಸೈಂಟ್ ಅಗ್ನೇಸ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ, ತುಳು ವಿದ್ವಾಂಸ ಅರುಣ್ ಉಳ್ಳಾಲ್ ಅವರು ಗುರು ಸಂದೇಶವನ್ನು ನೀಡಿ ಕರ್ನಾಟಕದಲ್ಲಿ ಬಸವಣ್ಣ, ಕೇರಳದಲ್ಲಿ ನಾರಾಯಣ ಗುರುಗಳು ಬದಲಾವಣೆಯನ್ನು ತಂದವರು. ಇಂದು ಧಾರ್ಮಿಕ ಕೇಂದ್ರಗಳು ಕೇವಲ ಆರಾಧನೆಗೆ ಮಾತ್ರ ಸೀಮಿತವಾಗುತ್ತಿದೆಯೇ ಎಂಬ ಸಂದೇಹ ಮೂಡುತ್ತಿದೆ. ಶಾಂತಿಧಾಮವಾಗಬೇಕಿರುವ ದೇವಸ್ಥಾನಗಳು ಈಗ ಆಡಂಬರದ ಆಕರ್ಷನೀಯ ಕೇಂದ್ರಗಳಾಗುತ್ತಿವೆ ಆದ್ದರಿಂದ ಶಾಂತಿ, ಮೌಲ್ಯದ ಧರ್ಮಗಳನ್ನು ಉಳಿಸುವುದು ಅನಿವಾರ್ಯವಾಗಿದೆ.
ಧಾರ್ಮಿಕ ಕೇಂದ್ರಗಳಲ್ಲಿ ದೇವರ ಬಗ್ಗೆ ಭಯ ದೂರವಾಗಿ ಪ್ರೀತಿ, ಭಕ್ತಿ ಹುಟ್ಟುವ ಕೇಂದ್ರಗಳಾಗಬೇಕೆನ್ನುವುದೇ ನಾರಾಯಣ ಗುರುಗಳ ಸಂದೇಶ ಎಂದರು.
ಸನ್ಮಾನ : ಬ್ರಹ್ಮಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ (ರಿ) ಇದರ ಅಧ್ಯಕ್ಷ ಸುರೇಶ್ ಕೆ.ಪೂಜಾರಿ ಅಧ್ಯಕ್ಷತೆಯಲ್ಲಿ ಕರ್ನಾಟಕ ಉಚ್ಛ ನ್ಯಾಯಾಲಯದ ನಿರ್ದೇಶಿತ ಹಿರಿಯ ನ್ಯಾಯಾವಾದಿ ಇರುವೈಲು ತಾರಾನಾಥ ಪೂಜಾರಿ, ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಉಮಾನಾಥ ಎ.ಕೋಟ್ಯಾನ್, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಅಂತರಾಷ್ಟ್ರೀಯ ಪವರ್ ಲಿಫ್ಟರ್ ಅಕ್ಷತಾ ಪೂಜಾರಿ, ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಡಾ.ಉಜ್ವಲ್ ಯು.ಸುವರ್ಣ ಅವರನ್ನು ಸನ್ಮಾನಿಸಲಾಯಿತು.
ಸಂಘದ ಉಪಾಧ್ಯಕ್ಷ ನವೀನ್ ಚಂದ್ರ ಕರ್ಕೇರಾ ಸನ್ಮಾನಿತರ ಪತ್ರ ವಾಚಿಸಿದರು.
ಗೌರವ : ಈ ಬಾರಿ ಎಸ್. ಎಸ್.ಎಲ್.ಸಿ.ಯಲ್ಲಿ ಮತ್ತು ಪಿಯುಸಿಯಲ್ಲಿ ಸಾಧನೆ ಮಾಡಿರುವ ಸಮಾಜದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ದ.ಕ.ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಜಿನೇಂದ್ರ ಕೋಟ್ಯಾನ್, ಮಂಗಳೂರು ವೆನ್ ಲಾಕ್ ಆಸ್ಪತ್ರೆಯ ಮೂತ್ರರೋಗ ತಜ್ಞ ಡಾ.ಸದಾನಂದ ಪೂಜಾರಿ, ಉದ್ಯಮಿ ಸದಾನಂದ ಪೂಜಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಶ್ರೀ ನಾರಾಯಣಗುರು ಸೇವಾದಳದ ಅಧ್ಯಕ್ಷ ಶ್ರೀರಾಜ್ ಸನಿಲ್, ಮಹಿಳಾ ಘಟಕದ ಅಧ್ಯಕ್ಷೆ ಸಾವಿತ್ರಿ ಕೇಶವ್ ಉಪಸ್ಥಿತರಿದ್ದರು.
ಬಿಲ್ಲವ ಸಂಘದ ಉಪಾಧ್ಯಕ್ಷ ಚಂದ್ರ ಕೆ.ಹೆಚ್. ಸ್ವಾಗತಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ಲಕ್ಷ್ಮಣ್ ಪೂಜಾರಿ, ಮಹಿಳಾ ಘಟಕದ ಜತೆ ಕಾರ್ಯದರ್ಶಿ ಸುಶ್ಮಿತಾ ಕಲ್ಲಬೆಟ್ಟು ಸನ್ಮಾನಿತರನ್ನು ಪರಿಚಯಿಸಿದರು. ಕೋಶಾಧಿಕಾರಿ ಜಗದೀಶ್ ಪೂಜಾರಿ ಮತ್ತು ಶಂಕರ್ ಕೋಟ್ಯಾನ್ ಸಾಧಕ ವಿದ್ಯಾರ್ಥಿಗಳ ವಿವರ ನೀಡಿದರು. ಸೇವಾದಳದ ಸಂಚಾಲಕ ರೋಹನ್ ಅತಿಕಾರಬೆಟ್ಟು ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಗಿರೀಶ್ ಹಂಡೇಲು ವಂದಿಸಿದರು.
0 Comments