ಆರ್ಥಿಕ ಸಬಲೀಕರಣ ಸಾಮಾಜಿಕ ಅರಣ್ಯದ ಮೂಲ ಉದ್ದೇಶ
ಮೂಡುಬಿದಿರೆ: ಪರಿಸರ ಮತ್ತು ಜೀವ ವೈವಿಧ್ಯದ ಅಭಿವೃದ್ಧಿ ಮತ್ತು ಸಂರಕ್ಷಣೆಯೊಂದಿಗೆ ಸ್ಥಳೀಯ ಸಮುದಾಯಗಳ ಆರ್ಥಿಕ ಸಬಲೀಕರಣ ಸಾಮಾಜಿಕ ಅರಣ್ಯದ ಮೂಲ ಉದ್ದೇಶವಾಗಿದೆ ಎಂದು ಮಂಗಳೂರು ವಿವಿ ಜೀವಶಾಸ್ತ್ರ ವಿಭಾಗದ ಉಪಾನ್ಯಾಸಕ ಮನೋಹರ ಆಚಾರ್ಯ ಹೇಳಿದರು.
ಸಮಾಜ ಮಂದಿರದಲ್ಲಿ ಶನಿವಾರ ನಡೆದ ಕೃಷಿ ವಿಚಾರ ವಿನಿಮಯ ಕೇಂದ್ರದ ಮಾಸಿಕ ಸಭೆಯಲ್ಲಿ `ಸಾಮಾಜಿಕ ಅರಣ್ಯ ಬೆಳೆಸಿ ಆರೋಗ್ಯ ಉಳಿಸಿ' ಎಂಬ ವಿಷಯದ ಕುರಿತು ಮಾತಡಿದರು.
ನಿಗದಿತ ಪ್ರಮಾಣದ ಅರಣ್ಯ ಇದ್ದಾಗ ಅಂತಹ ದೇಶ ಸಂಪತ್ಭರಿತವಾಗುವುದರೊಂದಿಗೆ ದೇಶದ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಗೆ ದೊಡ್ಡ ಕೊಡುಗೆಯನ್ನು ನೀಡಬಲ್ಲದು. ದೇಶದಲ್ಲಿ ಶೇ ೩೩ರಷ್ಟು ಪ್ರಮಾಣದ ಅರಣ್ಯ ಇರಬೇಕೆಂಬ ನಿಯಮ ಇದೆ. ಭಾರತದಲ್ಲಿ ಶೇಖಡಾ ೨೪.೬೨ ರಷ್ಟು ಮಾತ್ರ ಅರಣ್ಯ ಇದೆ. ಕಾಡು ಅಭಿವೃದ್ಧಿಯಾದರೆ ನಾಡು ಸಮೃದ್ಧಿಯಾಗುವುದರ ಜತೆಗೆ ಮನುಷ್ಯರ ಆರೋಗ್ಯವು ಸುಸ್ಥಿತಿಯಲ್ಲಿರುತ್ತದೆ ಎಂದರು.
ಹಿರಿಯ ಕೃಷಿಕ ಪ್ರಭಾತ್‌ಚಂದ್ರ ಜೈನ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಕೃಷಿ ಅಧಿಕಾರಿ ವಿ.ಎಸ್ ಕುಲಕರ್ಣಿ ಸರಕಾರಿ ಇಲಾಖೆಯಿಂದ ರೈತರಿಗೆ ಸಿಗುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಕೃಷಿ ವಿಚಾರ ವಿನಿಮಯ ಕೇಂದ್ರದ ಅಧ್ಯಕ್ಷ ಗುಣಪಾಲ ಮುದ್ಯ ಅಧ್ಯಕ್ಷತೆ ವಹಿಸಿದರು. ಕೋಶಾಧಿಕಾರಿ ಜಯರಾಜ್ ಕಂಬ್ಳಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಅಭಯ ಕುಮಾರ್ ಸ್ವಾಗತಿಸಿದರು. ಜಿನೇಂದ್ರ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಸುಭಾಶ್ಚಂದ್ರ ಚೌಟ ವಂದಿಸಿದರು.
0 Comments