ರೋಟರಿ ಮತ್ತು ಇನ್ನರ್ ವ್ಹೀಲ್ ಕ್ಲಬ್ ನಿಂದ ನಡ್ಯೋಡಿ ಶಾಲಾ ಮಕ್ಕಳಿಗೆ ಉಚಿತ ಬ್ಯಾಗ್ , ಪುಸ್ತಕ, ಕೊಡೆ ವಿತರಣೆ
ಮೂಡುಬಿದಿರೆ: ವಿದ್ಯಾರ್ಥಿಗಳು ಉತ್ತಮ ವ್ಯಕ್ತಿತ್ವವನ್ನು ರೂಪಿಸುವುದಕ್ಕೆ ವಿದ್ಯೆ ಅಗತ್ಯ. ನಾವು ಎಷ್ಟೇ ಎತ್ತರಕ್ಕೇರಿದರೂ ವಿದ್ಯೆ ಕಲಿಸಿದ ಗುರುವನ್ನು ಮರೆಯಬಾರದು ಎಂದು ರೋಟರಿ ಕ್ಲಬ್ ಅಧ್ಯಕ್ಷ ಬಿ. ನಾಗರಾಜ್ ಹೇಳಿದರು.
ಅವರು ರೋಟರಿ ಕ್ಲಬ್ ಮತ್ತು ಇನ್ನರ್ ವ್ಹೀಲ್ ಕ್ಲಬ್ ಮೂಡುಬಿದಿರೆ ಸಹಯೋಗದಲ್ಲಿ ಶುಕ್ರವಾರ ನಡ್ಯೋಡಿ ಸರಕಾರಿ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಉಚಿತ ಸ್ಕೂಲ್ ಬ್ಯಾಗ್ ಹಾಗೂ ಬರೆಯುವ ಪುಸ್ತಕಗಳನ್ನು ವಿತರಿಸಿ ಮಾತನಾಡಿದರು. ಕನ್ನಡ ಶಾಲೆಗೆ ಬರುವವರು ಸಾಮಾನ್ಯ ಕುಟುಂಬದ ಮಕ್ಕಳು. ನಡ್ಯೋಡಿ ಶಾಲೆಯ ಮಕ್ಕಳ ಕಲಿಕೆಗೆ ನಮ್ಮ ಸಂಸ್ಥೆ ಮುಂದೆಯೂ ಸಹಕಾರವನ್ನು ನೀಡುತ್ತದೆ ಎಂದರು. ರೋಟರಿ ಕ್ಲಬ್‌ನ ಹಿರಿಯ ಸದಸ್ಯ ಡಾ. ಆಶೀರ್ವಾದ್ ಮಾತನಾಡಿ ಸಮಾಜದಲ್ಲಿ ನಾವು ಕಾಣುತ್ತಿರುವ ಸಾಧಕರ ಪೈಕಿ ಹೆಚ್ಚಿನವರು ಕನ್ನಡ ಶಾಲೆಯಲ್ಲಿ ಓದಿ ಬಂದವರೆಂಬುದು ಗಮನಾರ್ಹ. ಆದ್ದರಿಂದ ಹೆತ್ತವರು, ಮಕ್ಕಳು ಕನ್ನಡ ಶಾಲೆ ಎಂಬ ಕೀಳರಿಮೆ ಬಿಡಬೇಕು. ಕಲಿಕೆಯಲ್ಲಿ ಶ್ರದ್ಧೆ ಮತ್ತು ಕಠಿಣ ಪರಿಶ್ರಮವಿದ್ದರೆ ಸಾಧನೆ ಕಷ್ಟ ಅಲ್ಲ ಎಂದರು.
ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷರಾದ ಸರಿತಾ ಆಶೀರ್ವಾದ್ ಮಕ್ಕಳಿಗೆ ಕೊಡೆಗಳನ್ನು ವಿತರಿಸಿ ಶುಭ ಹಾರೈಸಿದಿರು. ಕ್ಲಬ್‌ನ ಮಾಜಿ ಅಧ್ಯಕ್ಷೆ ಸಹನಾ ನಾಗರಾಜ್, ಕಾರ್‍ಯದರ್ಶಿ ಪೂರ್ಣಿಮಾ ಶೆಟ್ಟಿಗಾರ್, ರೋಟರಿ ಸದಸ್ಯ ಸಂತೋಷ್ ಕುಮಾರ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಸವಿತಾ, ಸಲಹಾ ಸಮಿತಿ ಅಧ್ಯಕ್ಷ ಗಂಗಾಧರ ಬಂಗೇರ, ಹಳೆ ವಿದ್ಯಾರ್ಥಿ ಸಂಘದ ಕಾರ್‍ಯದರ್ಶಿ ಯತೀಶ್ ಕೋಟ್ಯಾನ್ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಉಷಲತಾ ಸ್ವಾಗತಿಸಿದರು. ಪ್ರಸನ್ನ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೌರವ ಶಿಕ್ಷಕಿ ಮಮತ ರಾಜೇಶ್ ವಂದಿಸಿದರು.
0 Comments