ಭಾರತದಲ್ಲಿ ಫೇಸ್‌ಬುಕ್‌ ಕಾರ್ಯಚರಣೆ ಬಂದ್‌ : ಹೈಕೋರ್ಟ್‌ಎಚ್ಚರಿಕೆ

ಜಾಹೀರಾತು/Advertisment
ಜಾಹೀರಾತು/Advertisment

 ಬೆಂಗಳೂರು (ಜೂ.15): ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ ಕಾಯ್ದೆ(ಎನ್‌ಆರ್‌ಸಿ) ಬೆಂಬಲಿಸಿದ ಕಾರಣಕ್ಕೆ ಮಂಗಳೂರು ಮೂಲದ ಶೈಲೇಶ್‌ ಕುಮಾರ್‌ ಹೆಸರಿನಲ್ಲಿ ಅನಾಮಿಕರು ನಕಲಿ ಫೇಸ್‌ಬುಕ್‌ ಖಾತೆ ತೆರೆದು ಸೌದಿ ಅರೇಬಿಯಾದ ದೊರೆ ಬಗ್ಗೆ ಅವಹೇಳನಕಾರಿ ಪೋಸ್ಟ್‌ ಹಾಕಿದ ಪ್ರಕರಣದ ತನಿಖೆಗೆ ಸೂಕ್ತ ಸಹಕಾರ ನೀಡಬೇಕು. ಇಲ್ಲ​ದಿ​ದ್ದ​ರೆ ಭಾರತದಲ್ಲಿ ಫೇಸ್‌ಬುಕ್‌ ಕಾರ್ಯಚರಣೆ ಬಂದ್‌ ಮಾಡಲು ಆದೇಶ ಹೊರಡಿಸಬೇಕಾಗುತ್ತದೆ ಎಂದು ಹೈಕೋರ್ಟ್‌ ಎಚ್ಚರಿಕೆ ನೀಡಿದ ಘಟನೆ ಬುಧವಾರ ನಡೆಯಿತು. 



ಅನಾಮಿಕರು ನಕಲಿ ಫೇಸ್‌ಬುಕ್‌ ಖಾತೆ ತೆರೆದು ಅವಹೇಳನಕಾರಿ ಪೋಸ್ಟ್‌ ಹಾಕಿದ ಪ್ರಕರಣ ಸಂಬಂಧ ಸೌದಿ ಅರೇಬಿಯಾ ನ್ಯಾಯಾಲಯದಿಂದ 15 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿ ಕಳೆದ ಮೂರು ವರ್ಷಗಳಿಂದ ಅಲ್ಲಿಯೇ ಜೈಲುವಾಸ ಮಾಡುತ್ತಿರುವ ಮಂಗಳೂರಿನ ಬಿಕರನಕಟ್ಟೆ ನಿವಾಸಿ ಶೈಲೇಶ್‌ಕುಮಾರ ಪತ್ನಿ ಕವಿತಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರ ಪೀಠ ಈ ಎಚ್ಚರಿಕೆ ನೀಡಿದೆ.

ಘಟನೆ ಕುರಿತು ಸೂಕ್ತ ಮಾಹಿತಿ ಒಳಗೊಂಡ ವರದಿಯನ್ನು ಫೇಸ್‌ಬುಕ್‌ ಸಂಸ್ಥೆ ಒಂದು ವಾರದಲ್ಲಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು. ಸುಳ್ಳು ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಆತನ ಬಿಡುಗಡೆಗೆ ಯಾವೆಲ್ಲಾ ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆ ಕೇಂದ್ರ ಸರ್ಕಾರ ಅಗತ್ಯ ಮಾಹಿತಿ ನೀಡಬೇಕು. ಮಂಗಳೂರು ಪೊಲೀಸರು ಸಹ ಈ ಪ್ರಕರಣದ ಸಮರ್ಪಕ ತನಿಖೆ ಕೈಗೊಂಡು ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿದ ನ್ಯಾಯಪೀಠ ವಿಚಾರಣೆಯನ್ನು ಜೂ.22ಕ್ಕೆ ಮುಂದೂಡಿದೆ.


ಏನಿದು ಪ್ರಕ​ರ​ಣ?: ಮಂಗಳೂರಿನ ಬಿಕರನಕಟ್ಟೆ ನಿವಾಸಿ ಶೈಲೇಶ್‌ ಕುಮಾರ್‌ (45) ಕಳೆದ 25 ವರ್ಷಗಳಿಂದ ಸೌದಿ ಅರೇಬಿಯಾದ ಅಲ್‌ಕುಬರ್‌ ಪ್ರದೇಶದಲ್ಲಿ ಉದ್ಯೋಗ ಮಾಡುತ್ತಿದ್ದು, ಪತ್ನಿ ಮತ್ತು ಮಕ್ಕಳು ಬಿಕರನಕಟ್ಟೆಯಲ್ಲಿ ವಾಸ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ರೂಪಿಸಿದ ಸಿಎಎ ಮತ್ತು ಎನ್‌ಆರ್‌ಸಿ ಕಾಯ್ದೆ ಬೆಂಬಲಿಸಿ 2019ರಲ್ಲಿ ಸೌದಿ ಅರೇಬಿಯಾದಲ್ಲಿ ಶೈಲೇಶ್‌ ಫೇಸ್‌ಬುಕ್‌ ಪೋಸ್ಟ್‌ ಹಾಕಿದ್ದರು. ಇದರಿಂದ ಅನಾಮಿಕರಿಂದ ಬೆದರಿಕೆ ಬಂದ ಕಾರಣ ತಮ್ಮ ಫೇಸ್‌ಬುಕ್‌ ಖಾತೆಯನ್ನು ಶೈಲೇಶ್‌ ರದ್ದುಪಡಿಸಿದ್ದರು.


ಆದರೆ, 2020ರ ಫೆಬ್ರವರಿಯಲ್ಲಿ ಶೈಲೇಶ್‌ ಹೆಸರಿನಲ್ಲಿ ಅನಾಮಧೇಯ ವ್ಯಕ್ತಿಗಳು ನಕಲಿ ಫೇಸ್‌ಬುಕ್‌ ಖಾತೆ ತೆರೆದು ಸೌದಿ ಅರೇಬಿಯಾದ ದೊರೆ, ಆತನ ಜಾತಿ ವಿರುದ್ಧ ಅವಹೇಳನಕಾರಿ ಪೋಸ್ಟ್‌ ಮಾಡಿದ್ದರು. ಈ ವಿಷಯವನ್ನು ತಮ್ಮ ಸ್ನೇಹಿತರಿಗೆ ಮತ್ತು ಮಂಗಳೂರಿನ ಸಂಬಂಧಿಕರಿಗೆ ಶೈಲೇಶ್‌ ತಿಳಿಸಿದ್ದರು. ಇದೇ ವೇಳೆ ಸೌದಿ ಪೊಲೀಸರು ಶೈಲೇಶ್‌ನನ್ನು ಬಂಧಿಸಿದ್ದರು. ಮಂಗಳೂರಿನಲ್ಲಿ ಆತನ ಪತ್ನಿ ಕವಿತಾ ಘಟನೆ ಕುರಿತು ದಾಖಲಿಸಿದ್ದ ದೂರಿನ ಮೇರೆಗೆ ತನಿಖೆ ಕೈಗೆತ್ತಿಕೊಂಡಿದ್ದ ಮಂಗಳೂರು ಪೊಲೀಸರು, ಫೇಸ್‌ಬುಕ್‌ ಸಂಸ್ಥೆಗೆ ಪತ್ರ ಬರೆದು, ಶೈಲೇಶ್‌ ಹೆಸರಿನಲ್ಲಿ ನಕಲಿ ಖಾತೆ ತೆರೆದವರ ಮಾಹಿತಿ ನೀಡುವಂತೆ ಕೋರಿದ್ದರು.


ಈ ನಡುವೆ ಪೊಲೀಸರು ನಿಧಾನಗತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ ಎಂದು ಆಕ್ಷೇಪಿಸಿ 2021ರಲ್ಲಿ ಹೈಕೋರ್ಟ್‌ಗೆ ಅರ್ಜಿ​ದಾ​ರ​ರು ತಕರಾರು ಅರ್ಜಿ ಸಲ್ಲಿಸಿದ್ದರು. ಮಂಗಳೂರು ನಗರ ಪೊಲೀಸ್‌ ಆಯುಕ್ತ ಕುಲದೀಪ್‌ ಜೈನ್‌ ಹಾಗೂ ಪ್ರಕರಣದ ತನಿಖಾಧಿಕಾರಿ ಬುಧವಾರ ವಿಚಾರಣೆಗೆ ಹಾಜರಾಗಿ, ಫೇಸ್‌ಬುಕ್‌ ಸಂಸ್ಥೆಯಿಂದ ಸಹಕಾರ ಸಿಗದ ಕಾರಣಕ್ಕೆ ಸೂಕ್ತ ತನಿಖೆ ನಡೆಸಲಾಗಲಿಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಆಗ ನ್ಯಾಯಮೂರ್ತಿಗಳು, ಈ ಬಗ್ಗೆ ಪ್ರಶ್ನಿಸಿದಾಗ ಫೇಸ್‌ಬುಕ್‌ ಪರ ವಕೀಲರು, ‘ಘಟನೆ ಎಲ್ಲಿ ನಡೆದಿದೆ ಎಂಬುದರ ಕುರಿತು ತಮಗೆ ಸರಿಯಾದ ಮಾಹಿತಿ ಇಲ್ಲ’ ಎಂದು ಉತ್ತರಿಸಿದರು.

ಇದರಿಂದ ಆಕ್ರೋಶಗೊಂಡ ನ್ಯಾಯಮೂರ್ತಿಗಳು, ‘ಪ್ರಕರಣದ ತನಿಖೆಗೆ ಸೂಕ್ತ ಸಹಕಾರ ನೀಡದಿದ್ದರೆ ಭಾರತದಲ್ಲಿ ಫೇಸ್‌ಬುಕ್‌ ಕಾರ್ಯಾಚರಣೆಯನ್ನೇ ನಿಲ್ಲಿಸಲು ಆದೇಶ ನೀಡಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು. ಇದರಿಂದ ಎಚ್ಚೆತ್ತ ಫೇಸ್‌ಬುಕ್‌ ಪರ ವಕೀಲರು, ‘ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ನೀಡಲು ಒಂದು ವಾರ ಕಾಲಾವಕಾಶ ನೀಡಬೇಕು’ ಎಂದು ಕೋರಿದರು. ಈ ಮನವಿ ಒಪ್ಪಿದ ನ್ಯಾಯಾಲಯ, ಮಾಹಿತಿ ಸಲ್ಲಿಸಲು ಜೂ.22ರವರೆಗೆ ಕಾಲಾವಕಾಶ ನೀಡಿತು.


(ಮಾಹಿತಿ ಕೃಪೆ: ಏಷ್ಯಾ ನೆಟ್ ಸುವರ್ಣ ನ್ಯೂಸ್)

Post a Comment

0 Comments