ಸಾವಿರ ಕಂಬದ ಬಸದಿಯಲ್ಲಿ ರಥೋತ್ಸವ
ಮೂಡುಬಿದಿರೆ: ಭಗವಾನ್ ಶ್ರೀ ಮಹಾವೀರರ 2622ನೇ ಜಯಂತಿಯ ಅಂಗವಾಗಿ ಮೂಡುಬಿದಿರೆಯ ತ್ರಿಭುವನ ತಿಲಕ ಚೂಡಾಮಣಿ ಬಸದಿಯಲ್ಲಿ (ಸಾವಿರ ಕಂಬದ ಬಸದಿ) ರಥೋತ್ಸವವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಇಂದಿನಿಂದ (ಏ-1 ರಿಂದ 7ರವರೆಗೆ) ಅರಂಭಗೊಂಡು ಸಂಪನ್ನಗೊಳ್ಳಲಿದೆ ಎಂದು ಶ್ರೀಜೈನ ಮಠದ "ಭಾರತ ಭೂಷಣ" ಸ್ವಸ್ತಿ ಶ್ರೀ ಭಟ್ಟರಕ ಚಾರುಕೀರ್ತಿ ಪಂಡಿತಾಚಾರ್ಯ ಸ್ವಾಮೀಜಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಿರಿಯ ರಥೋತ್ಸವವು ಏ.5ರಂದು ಮೂಡುಬಿದಿರೆ ಶ್ರೀಗಳ ಅಧ್ಯಕ್ಷತೆಯಲ್ಲಿ ಆರಂಭಗೊಳ್ಳಲಿದ್ದು ಶ್ರೀ ಮಹಾವೀರ ಜಯಂತಿಯನ್ನು ಕಲ್ಲಮುಂಡ್ಕೂರಿನ ಜಯಪ್ರಕಾಶ್ ಪಡಿವಾಳ್ ಮಾಲ್ದಬೆಟ್ಟು ಉದ್ಘಾಟಿಸಲಿದ್ದಾರೆ. ಎಂಸಿಎಸ್ ಬ್ಯಾಂಕಿನ ಅಧ್ಯಕ್ಷ ಎಂ.ಬಾಹುಬಲಿ ಪ್ರಸಾದ್ ಮಹಾವೀರ ಜ್ಯೋತಿಯನ್ನು ಬೆಳಗಿಸಲಿದ್ದಾರೆ. ಶಾಸಕ ಉಮಾನಾಥ ಕೋಟ್ಯಾನ್, ಕೆ.ಪಿ.ಜಗದೀಶ ಅಧಿಕಾರಿ, ಉದ್ಯಮಿ ರಾಜೇಂದ್ರ ಜೈನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಜೆ ಕಲ್ಲಬೆಟ್ಟು ಎಕ್ಸಲೆಂಟ್ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು .
ರಾತ್ರಿ 9.35ಕ್ಕೆ ಕಿರಿಯ ರಥೋತ್ಸವ, ವಿವಿಧ ಉತ್ಸವ, ಸೇವೆಗಳು ಮತ್ತು ಧಾರ್ಮಿಕ ಸಭೆ ನಡೆಯಲಿದೆ.
ಏ.6ರಂದು ಸ್ವಾಮೀಜಿಯವರ ನೇತೃತ್ವದಲ್ಲಿ ಹಿರಿಯ ರಥೋತ್ಸವ ಮತ್ತು ಶ್ರಮಣ ಸಂಸ್ಕೃತಿ ಸಮ್ಮೇಳನ ನಡೆಯಲಿದ್ದು ಕೆ.ಅಭಯಚಂದ್ರ ಜೈನ್ ಅವರು ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಶಿರ್ತಾಡಿ ಶಿಮ್ಮುಂಜೆಗುತ್ತು ಎಸ್.ಡಿ.ಸಂಪತ್ ಸಾಮ್ರಾಜ್ಯ ಶ್ರಮಣ ಜ್ಯೋತಿಯನ್ನು ಬೆಳಗಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶೈಲೇಂದ್ರ ಕುಮಾರ್ ಆರೋಹ, ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್, ಜೈನ್ ಮೆಡಿಕಲ್ ನ ಡಾ.ಮಹಾವೀರ ಜೈನ್ ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ನಂತರ ಧವಳತ್ರಯ ಜೈನ ಕಾಶಿ ಟ್ರಸ್ಟ್ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಬಳಿಕ ಭಗವಾನ್ ಶ್ರೀ 1008 ಚಂದ್ರನಾಥ ಸ್ವಾಮಿ ರಥೋತ್ಸವ ಶ್ರೀ ವಿಹಾರ ನೆರವೇರಲಿದೆ ಎಂದು ತಿಳಿಸಿದರು.
ಪಟ್ಣಶೆಟ್ಟಿ ಎಂ.ಸುದೇಶ್ ಕುಮಾರ್, ಆನಡ್ಕ ದಿನೇಶ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
0 Comments