ಮೂಡುಬಿದಿರೆ ಪುರಸಭಾಧಿವೇಶನ
ಕುಡಿಯುವ ನೀರಿಗೆ ತುರ್ತು ವ್ಯವಸ್ಥೆಗೆ ನಿರ್ಣಯ
ಮೂಡುಬಿದಿರೆ: ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ವ್ಯಾಪ್ತಿಯ ಎಲ್ಲಾ ವಾರ್ಡುಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಗೆ ಬೇಕಾದ ತುರ್ತು ಕ್ರಮ ಕೈಗೊಳ್ಳುವಂತೆ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು.
ಮೂಡುಬಿದಿರೆ ಪುರಸಭಾ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ. ಬಾವಿಗಳಲ್ಲಿ ನೀರು ಬತ್ತುತ್ತಿದೆ. ನೀರುಣಿಸುವ ಪುಚ್ಚಮೊಗರು ಅಣೆಕಟ್ಟಿನಲ್ಲೂ ನೀರಿನ ಹರಿವು ಕ್ಷೀಣಿಸುತ್ತಿದೆ. ಮುಂದಿನ ಎರಡು ತಿಂಗಳುಗಳ ಕಾಲ ತೀವ್ರ ತೊಂದರೆಯಾಗುವ ಮುನ್ಸೂಚನೆಯಿದೆ ಎಂಬ ಅಭಿಪ್ರಾಯ ಸದಸ್ಯರಿಂದ ವ್ಯಕ್ತವಾಯಿತು.
ಸಮಸ್ಯೆಗೆ ಸ್ಪಂದಿಸಿದ ಅಧ್ಯಕ್ಷ ಪ್ರಸಾದ್ ಕುಮಾರ್ ಅವಶ್ಯಕವಿದ್ದಷ್ಟು ಬೋರ್ ವೆಲ್ ಕೊರೆಯಿಸುವುದು ಹಾಗೂ ಈಗಿರುವ ಬೋರ್‌ವೆಲ್‌ಗಳ ಮೂಲಕ ಜನತೆಗೆ ಕುಡಿಯುವ ನೀರನ್ನೊದಗಿಸುವ ಭರವಸೆ ನೀಡಿದರು. ತಕ್ಷಣಕ್ಕೆ ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ಸೂಚಿಸಿದರು.ಉಪಾಧ್ಯಕ್ಷೆ ಸುಜಾತಾ, ಸ್ಥಾಯ ಸಮಿತಿ ಅಧ್ಯಕ್ಷ ನಾಗರಾಜ್ ಪೂಜಾರಿ ಅವರು ನೀರಿನ ಸಮಸ್ಯೆಗೆ ತುರ್ತು ಕ್ರಮ ಕೈಗೊಳ್ಳುವ ಬಗ್ಗೆ ಧ್ವನಿಗೂಡಿಸಿದರು.
ತರಾಟೆ: ವಾರ್ಡ್ ೯ರ ಅಮ್ಮನವರ ಬಸದಿ ಬಳಿ ನಾಲ್ಕು ಅಂತಸ್ತಿನ ಕಟ್ಟಡ ನಿರ್ಮಿಸುತ್ತಿದ್ದು, ಬಸದಿಯ ಬಳಿ ತೀರ್ಥಕೆರೆ, ಮನೆ ಬಾವಿಗಳಿದ್ದು ಇದೀಗ ನೂತನ ಕಟ್ಟಡ ನಿರ್ಮಾಣವಾದಲ್ಲಿ ಕೊಳಚೆ ನೀರನ್ನು ಹೇಗೆ ನಿರ್ವಹಿಸಲಾಗುತ್ತದೆ ಎಂಬ ಆತಂಕದಿಂದ ನಾಗರೀಕರು ಪುರಸಭೆಗೆ ನೀಡಿದ ಅರ್ಜಿ ಚರ್ಚೆಗೆ ಕಾರಣವಾಯಿತು. ಅರ್ಜಿ ಬಂದರೂ ಕಟ್ಟಡ ಕಾಮಗಾರಿಯನ್ನು ಪರಿಶೀಲಿಸುವ ಅಥವಾ ತಡೆ ನೀಡುವ ಕಾರ್ಯವನ್ನು ಪುರಸಭಾ ಅಧಿಕಾರಿಗಳು ಮಾಡಿಲ್ಲ, ಏನು ಕ್ರಮ ಕೈಗೊಂಡಿದ್ದೀರಿ ಎಂದು ಸದಸ್ಯೆ ಶ್ವೇತಾ ಕುಮಾರಿ ಮುಖ್ಯಾಧಿಕಾರಿ ಶಿವ ನಾಯ್ಕ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಪುರಸಭಾ ಇಂಜಿನಿಯರ್ ಅವರಿಗೂ ಮಾಹಿತಿ ನೀಡಲಾಗಿದೆ, ಮೌಖಿಕವಾಗಿ ಮುಖ್ಯಾಧಿಕಾರಿಗಳಿಗೂ ತಿಳಿಸಿರುತ್ತೇನೆ. ತಿಂಗಳು ಕಳೆದರೂ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ, ಮೀಟಿಂಗ್ ಅಜೆಂಡಾದಲ್ಲಿ ಈ ವಿಚಾರವಿದ್ದರೂ ಮುಖ್ಯಾಧಿಕಾರಿಗಳು ಗಮನಿಸದೆ ಸಹಿ ಮಾಡಿದ್ದಾರೆ, ಈ ಬಗ್ಗೆ ಸ್ಪಷ್ಟನೆ ನೀಡಿ ಎಂದು ಆಗ್ರಹಿಸಿದರು. ಈ ರೀತಿಯ ಸಮಸ್ಯೆ ಹಲವು ವಾರ್ಡುಗಳಲ್ಲಿವೆ. ಸೆಟ್ ಬ್ಯಾಕ್ ಇಲ್ಲ, ಪಾರ್ಕಿಂಗ್ ವ್ಯವಸ್ಥೆಯಿಲ್ಲ, ಇಂತಹ ತೊಂದರೆ ಇರುವ ಹಲವು ಕಟ್ಟಡಗಳು ಪುರಸಭಾ ವ್ಯಾಪ್ತಿಯೊಳಗೆ ಕಂಡುಬರುತ್ತಿವೆ. ಇವುಗಳಿಗೆ ಖಾತೆ, ಕದ ಸಂಖ್ಯೆ ನೀಡಬಾರದೆಂದು ಸದಸ್ಯರು ಆಗ್ರಹಿಸಿದರು. ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಸಮಸ್ಯೆ ಬಗೆಹರಿಸಲು ಸೂಚಿಸಿದರು. ಸಭೆಯ ನಂತರ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುವುದಾಗಿ ಮುಖ್ಯಾಧಿಕಾರಿಗಳು ಸದಸ್ಯರಿಗೆ ಮಾಹಿತಿ ನೀಡಿದರು.
ಪುರಸಭಾ ಸಭೆಯಲ್ಲಿ ಚರ್ಚಿಸಿ ವಿವಿಧ ಇಲಾಖೆಗೆ, ಅಧಿಕಾರಿಗಳಿಗೆ ಬರೆದ ಪತ್ರಗಳ ಪ್ರತಿಯ ಕಡತವೊಂದನ್ನು ತಯಾರಿಸಿ, ಪ್ರತೀ ಸಭೆಯ ಸಂದರ್ಭ ಸಭೆಗೆ ಮಂಡಿಸಬೇಕೆಂಬ ವಿಚಾರದಲ್ಲಿ ಪುರಸಭಾ ಹಿರಿಯ ಸದಸ್ಯ ಪಿ.ಕೆ.ಥೋಮಸ್ ಸಲಹೆ ನೀಡಿದರು. ಇದನ್ನು ಸರ್ವಾನುಮತದಿಂದ ಅಂಗೀಕರಿಸಿ ನಿರ್ಣಯಿಸಲಾಯಿತು. ಮುಂದಿನ ಸಭೆಯಿಂದಲೇ ಇದು ಅನುಷ್ಠಾನವಾಗುವಂತೆ ಒಪ್ಪಿಗೆ ನೀಡಲಾಯಿತು.
ತೆರಿಗೆ ಪರಿಷ್ಕರಣೆಗೆ ವಿಪಕ್ಷ ವಿರೋಧ:
ಶೇ.3ರಿಂದ ಶೇ.5 ವರೆಗೆ ತೆರಿಗೆ ಪರಿಷ್ಕರಣೆ ಮಾಡುವುದಕ್ಕೆ ವಿಪಕ್ಷದ ವಿರೋಧವಿದೆ ಎಂದು ಸದಸ್ಯ ಸುರೇಶ್ ಪ್ರಭು ಸಭೆಯಲ್ಲಿ ತಿಳಿಸಿದರು.
ಹಿಂದೆ ಮೂರು ವರ್ಷಕ್ಕೆ ಶೇ.15 ತೆರಿಗೆ ಪರಿಷ್ಕರಣೆಯಾಗುತ್ತಿತ್ತು. ಸರ್ಕಾರದ ಸುತ್ತೋಲೆ ಪ್ರಕಾರ ಈಗ ಪ್ರತಿ ವರ್ಷಕ್ಕೆ ಶೇ.3 ಅನ್ನು ಏರಿಸಲಾಗುತ್ತಿದೆ ಎಂದು ಕಂದಾಯ ನಿರೀಕ್ಷಕಿ ಯಾಸಿನಾ ಮಾಹಿತಿ ನೀಡಿದರು. ತೆರಿಗೆ ಪರಿಷ್ಕರಣೆ ಮಾಡದಿದ್ದಲ್ಲಿ ತೆರಿಗೆದಾರರಿಗೆ ಹೊರೆಯಾಗುತ್ತದೆ ಎಂದು ಮುಖ್ಯಾಧಿಕಾರಿ ತಿಳಿಸಿದರು. ಈ ಬಗ್ಗೆ ಸೂಕ್ತ ಅಧ್ಯಯನ ಮಾಡಿ, ಮುಂದಿನ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಪುರಸಭೆ ಅಧ್ಯಕ್ಷರು ತಿಳಿಸಿದರು.
ಮುಖ್ಯರಸ್ತೆಗೆಬಳಿ ಇರುವ ಮಂಗ್ರತ್ ಕಾಂಪ್ಲೆಕ್ಸ್ ಎದುರಿನ ರಸ್ತೆಗೆ 9 ತಿಂಗಳ ಹಿಂದೆಯೇ ಟೆಂಡರ್ ಪ್ರಕ್ರಿಯೆ ಮುಗಿದಿದ್ದರೂ ಕಾಮಗಾರಿ ಇನ್ನೂ ಪ್ರಾರಂಭವಾಗಿಲ್ಲ. ಶೀಘ್ರ ಕಾಮಗಾರಿ ಪ್ರಾರಂಭವಾಗದಿದ್ದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರ ಮನೆ ಎದುರಿನಲ್ಲಿ ಪ್ರತಿಭಟನೆ ನಡೆಸುತ್ತೇನೆ ಎಂದು ವಾರ್ಡ್ ಸದಸ್ಯೆ ಶಕುಂತಳಾ ದೇವಾಡಿಗ ಎಚ್ಚರಿಸಿದರು. ಕಾಮಗಾರಿ ಪ್ರಾರಂಭಿಸುವಂತೆ ಹಲವಾರು ಬಾರಿ ಗುತ್ತಿಗೆದಾರರಿಗೆ ಸೂಚನೆ ನೀಡಿದ್ದೇನೆ ಎಂದು ಅಧ್ಯಕ್ಷರು ಸಮಜಾಯಿಸಿದರು. ಸೂಕ್ತ ಸಮಯದಲ್ಲಿ ಕಾಮಗಾರಿ ಪ್ರಾರಂಭಿಸಿದ ಗುತ್ತಿಗೆದಾರನನ್ನು ಬ್ಲಾಕ್‌ಲೀಸ್ಟ್ಗೆ ಸೇರಿಸಿ ಎಂದು ಸದಸ್ಯರು ಪಟ್ಟು ಹಿಡಿದರು.
ಸದಸ್ಯರಾದ ಪಿ.ಕೆ ಥೋಮಸ್, ಸುರೇಶ್ ಕೋಟ್ಯಾನ್, ಕರೀಂ, ರಾಜೇಶ್ ನಾಯ್ಕ್, ರೂಪಾ ಸಂತೋಷ್ ಶೆಟ್ಟಿ, ದಿನೇಶ್ ಪೂಜಾರಿ, ಗಿರೀಶ್ ಕುಮಾರ್ ಚರ್ಚೆಯಲ್ಲಿ ಪಾಲ್ಗೊಂಡರು.
ಕಚೇರಿ ವ್ಯವಸ್ಥಾಪಕಿ ಮೀನಾಕ್ಷಿ ಉಪಸ್ಥಿತರಿದ್ದರು.
ಸಂತಾಪ: ಶ್ರವಣ ಬೆಳಗೊಳ ಜೈನಮಠದ ಪರಮಪೂಜ್ಯ ಸ್ವಸ್ತಿಶ್ರೀ ಚಾರುಕೀರ್ತಿ ಸ್ವಾಮೀಜಿಯವರ ಅಗಲುವಿಕೆಗೆ ಪುರಸಭೆಯಲ್ಲಿ ಒಂದು ನಿಮಿಷಗಳ ಕಾಲ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
0 Comments