ಕಡಲಕೆರೆ ಬಳಿ ಹತ್ತಾರು ಎಕರೆ ಜಾಗ ಬೆಂಕಿಗಾಹುತಿ
ಮೂಡುಬಿದಿರೆ: ಇಲ್ಲಿನ ಒಂಟಿಕಟ್ಟೆ ಕಡಲಕೆರೆಯ ನಿಸರ್ಗಧಾಮದ ಬಳಿ ಹತ್ತು ಎಕರೆಗಿಂತಲೂ ಹೆಚ್ಚಿನ ಸರಕಾರಿ ಮತ್ತು ಖಾಸಗಿ ಜಾಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಅಗ್ನಿಶಾಮಕ ದಳದ ಅಧಿಕಾರಿಗಳು ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.
ಕಡಲಕೆರೆ ಅಗ್ನಿಶಾಮಕ ದಳದ ಕಛೇರಿ ಮತ್ತು ವಸತಿ ಗೃಹದ ಸುತ್ತ, ನೆಲ್ಲಿಗುಡ್ಡೆ, ಕಡ್ಲಗುಡ್ಡೆ ಪ್ರದೇಶದಲ್ಲಿ ಬೆಳಿಗ್ಗೆ 11 ಗಂಟೆಯ ವೇಳೆಗೆ ಬೆಂಕಿ ಹೊತ್ತಿ ಉರಿಯಲಾರಂಭಿಸಿದೆ.
ನಿಸರ್ಗಧಾಮದ ಸಾಲು ಮರದ ತಿಮ್ಮಕ್ಕ ಉದ್ಯಾನವನ, ಕಡಲಕೆರೆ ಕೈಗಾರಿಕಾ ಪ್ರದೇಶದ ಬಳಿ ಹೊಗೆ ತುಂಬಿಕೊಂಡಿದೆ.
ಅಗ್ನಿಶಾಮಕ ದಳದ ವಸತಿಗೃಹದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ಸರಕಾರಿ ಜಾಗವು ಕಾಡು ಪ್ರದೇಶದಿಂದ ಕೂಡಿರುವುದರಿಂದ ಅಗ್ನಿಶಾಮಕ ವಾಹನವು ಒಳ ಹೋಗಿ ಬೆಂಕಿ ನಂದಿಸಲು ಕಷ್ಟವಾಗುತ್ತಿದೆ ಅಲ್ಲದೆ ಅಗ್ನಿಶಾಮಕ ದಳದಲ್ಲಿ ಸಿಬಂಧಿಗಳ ಕೊರತೆಯೂ ಇರುವುದರಿಂದ ಬೆಂಕಿ ನಂದಿಸಲು ಕಷ್ಟಸಾಧ್ಯವಾಗುತ್ತಿದೆ.
ಸಹಾಯಕ ಅಗ್ನಿಶಾಮಕ ಅಧಿಕಾರಿ ಸ್ಟೀಫನ್ ಮತ್ತು ಸಿಬಂಧಿಗಳು ಬೆಂಕಿನಂದಿಸಲು ಯತ್ನಿಸುತ್ತಿದ್ದಾರೆ.
ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ,ಕಂಬಳ ಓಟಗಾರ ರಿತೇಶ್ ,ವಿಜೇಶ್, ಸುಧೀರ್ ಶೆಟ್ಟಿ,ತಾರಾನಾಥ್ ಒಂಟಿಕಟ್ಟೆ, ಕಿಶೋರ್ ನಾಯ್ಕ್,ಭಜರಂಗ ದಳ ಮೂಡುಬಿದ್ರಿ ಘಟಕದ ಕಾರ್ಯಕರ್ತರು ಹಾಗೂ ಒಂಟಿಕಟ್ಟೆಯ ಯುವಕರು ಬೆಂಕಿ ನಂದಿಸಲು ಮತ್ತು ನೀರಿನ ವ್ಯವಸ್ಥೆಗೆ ಸಹಕರಿಸಿದ್ದಾರೆ.
0 Comments