ಕೈಗಾರಿಕಾ ಪ್ರದೇಶದ ಭೂಸ್ವಾಧೀನಕ್ಕೆ ಎಸ್‌ಡಿಪಿಐ ಆರೋಪ
ಮೂಡುಬಿದಿರೆ: 1962ರಲ್ಲಿ ಕಡಲಕೆರೆಯಲ್ಲಿ ಆರಂಭವಾಗಿರುವ ಕೈಗಾರಿಕಾ ಪ್ರದೇಶವನ್ನು ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಯ ಉದ್ದೇಶದಿಂದ ಭೂಸ್ವಾಧೀನ ಮಾಡುವ ನಿರ್ಧಾರವನ್ನು ಕೈಬಿಡಬೇಕು ಎಂದು ಎಸ್‌ಡಿಪಿಐ ಕ್ಷೇತ್ರ ಅಧ್ಯಕ್ಷ ಆಸಿಫ್ ಕೋಟೆಬಾಗಿಲು ಆಗ್ರಹಿಸಿದ್ದಾರೆ.
ಅವರು ಎಸ್ ಡಿಪಿಐ ವತಿಯಿಂದ ಬುಧವಾರ ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.
ಈ ಕೈಗಾರಿಕಾ ಪ್ರದೇಶವನ್ನು ಹೆದ್ದಾರಿ ಅಧಿಕಾರಿಗಳು ಕಾನೂನಬಾಹಿರವಾಗಿ ಭೂಸ್ವಾಧೀನ ಮಾಡುವ ಪ್ರಕ್ರಿಯೆ
ನಡೆಸುತ್ತಿದ್ದಾರೆ. ಇದರಿಂದ ಇಲ್ಲಿರುವ ಸಣ್ಣ ಉದ್ದಿಮೆದಾರರು ಹಾಗೂ ಅವರ ಕುಟುಂಬ ಬೀದಿಗೆ ಬೀಳಲಿದೆ ಎಂದು ಅವರು
ಆತಂಕ ವ್ಯಕ್ತಪಡಿಸಿದರು.
ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮಾರ್ಪಾಡಿ ಗ್ರಾಮದಲ್ಲಿ ಸರ್ಕಾರಿ ಜಾಗವನ್ನು ಬಿಟ್ಟು ಖಾಸಗಿ ಜಾಗವನ್ನು ಸ್ವಾಧೀನಪಡಿಸಿಕೊಂಡು ಅಲೈನ್‌ಮೆಂಟ್ ಮಾಡಿರುತ್ತಾರೆ. ಕೆಲವೆಡೆ ಅವೈಜ್ಞಾನಿಕವಾಗಿ ರಸ್ತೆಯ ಪಥವನ್ನು ಬದಲಾಯಿಸಿದ್ದಾರೆ. ಇದರಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿಬರುತ್ತಿದೆ. ಸುರಕ್ಷತೆಯ ದೃಷ್ಟಿಯಿಂದ ಕೈಗಾರಿಕಾ ಪ್ರದೇಶದಲ್ಲಿ ಕನಿಷ್ಟ 300 ಮೀಟರ್ ದೂರದಲ್ಲಿ ಹೆದ್ದಾರಿ ಹಾದುಹೋಗಬೇಕೆಂಬ ನಿಯಮವನ್ನು ಇಲ್ಲಿ ಉಲ್ಲಂಘಿಸಲಾಗಿದೆ.
2014ರಲ್ಲಿ ಆರಂಭವಾದ ಹೆದ್ದಾರಿ ವಿಸ್ತರಣೆ ಪ್ರಕ್ರಿಯೆ ಇನ್ನೂ ಆಮೆನಡಿಗೆಯಲ್ಲಿ ಸಾಗುತ್ತಿದೆ. ಪ್ರಭಾವಿಗಳ ಒತ್ತಡಕ್ಕೆ ಮಣಿದು ಎರಡು ಬಾರಿ ಹೆದ್ದಾರಿ ಪಥವನ್ನು ಬದಲಾಯಿಸಲಾಗಿದೆ. ಸಂತ್ರಸ್ತರಿಗೆ ಪರಿಹಾರದ ಹೆಸರಿನಲ್ಲು ಮೋಸ ಮಾಡಲಾಗಿದೆ. ಜಿಲ್ಲೆಯ ಶಾಸಕರು, ಸಂಸದರು ಸಾರ್ವಜನಿಕ ಹಿತಾಸಕ್ತಿಯನ್ನು ಮರೆತು ಭ್ರಷ್ಟ ಅಧಿಕಾರಿಶಾಹಿಗಳಿಗೆ ಬೆಂಬಲವಾಗಿ ನಿಂತಿರುವುದರಿಂದ ಈ ಸಮಸ್ಯೆ ಉಂಟಾಗಿದೆ ಎಂದು ಆರೋಪಿಸಿದರು.
ಮಂಗಳೂರಿನಲ್ಲಿ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಉಮಾನಾಥ ಕೋಟ್ಯಾನ್ ಹಾಗೂ ಹೆದ್ದಾರಿ ಪ್ರಾಧಿಕಾರದ ವಿವಿಧ ಅಧಿಕಾರಿಗಳ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಮಾರ್ಪಾಡಿ ಗ್ರಾಮದಲ್ಲಿ ಖಾಸಗಿ ಜಮೀನಿನ ಬದಲಾಗಿ ಲಭ್ಯ ಇರುವ ಸರಕಾರಿ ಜಮೀನನನ್ನು ಹೆದ್ದಾರಿ ವಿಸ್ತರಣೆಗೆ ಬಳಕೆ ಮಾಡಲಾಗುವುದು ಹಾಗೂ ಕೈಗಾರಿಕಾ ಪ್ರದೇಶಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಲಾಗಿದೆ. ಈ ಬಗ್ಗೆ ಹೆದ್ದಾರಿ ಪ್ರಾಧಿಕಾರ ಎಪ್ರಿಲ್ 6ರ ಒಳಗೆ ಅಧಿಕೃತ ಮಾಹಿತಿಯನ್ನು ಪ್ರಕಟಿಸಬೇಕು ಮತ್ತು 3 ಜಿ. ಅವಾರ್ಡ್ ಮಾಡಿದ ದಾಖಲೆಯನ್ನು ಒದಗಿಸಬೇಕು. ಇಲ್ಲದಿದ್ದಲ್ಲಿ ಎಸ್‌ಡಿಪಿಐ ಸಂತ್ರಸ್ತರ ಜತೆಸೇರಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಎಸ್‌ಡಿಪಿಐ ಮೂಡುಬಿದಿರೆ ವಿಧಾನಸಭಾ ಕ್ಷೇತ್ರ ಅಭ್ಯರ್ಥಿ ಆಲ್ಫೋನ್ಸ್ ಫ್ರಾಂಕೊ, ಪಂಚಾಯಿತಿ ಸದಸ್ಯ ಫಿರೋಝ್ ಹಂಡೇಲು, ಗ್ರಾಮ ಸಮಿತಿ ಅಧ್ಯಕ್ಷ ಆಸಿಫ್ ಹಂಡೇಲು ಮತ್ತಿತರರು ಉಪಸ್ಥಿತರಿದ್ದರು.
0 Comments