ಬೆಳುವಾಯಿ: ರೂ 13 ಕೋ.ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ
ಮೂಡುಬಿದಿರೆ: ಬೆಳುವಾಯಿ ಗ್ರಾ.ಪಂ.ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಸುಮಾರು ರೂ.7.5 ಕೋ.ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ರೂ13 ಕೋ.ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಉಮಾನಾಥ ಕೋಟ್ಯಾನ್ ಮಂಗಳವಾರ ಶಿಲಾನ್ಯಾಸ ನೆರವೇರಿಸಿದರು.
ನಂತರ ಮಾತನಾಡಿದ ಕೋಟ್ಯಾನ್ ಮೂಲಭೂತ ಸೌಕರ್ಯ ಮತ್ತು ಕೃಷಿಗೆ ಆದ್ಯತೆಯನ್ನು ನೀಡಲಾಗಿದೆ. ಕ್ಷೇತ್ರದ ಅಭಿವೃದ್ಧಿಗಾಗಿ ಪಕ್ಷ - ಜಾತಿ ಬೇಧ ಮರೆತು ರೂ 2000 ಕೋ.ರೂಗಳ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗಿದೆ. ಶಾಸಕನಾಗಿ ಆಯ್ಕೆಯಾದ ಮೊದಲ ಎರಡು ವರ್ಷ ಕೊರೋನಾದಿಂದ ಸ್ವಲ್ಪ ತೊಂದರೆಯಾಯಿತು ಇಲ್ಲದಿದ್ದರೆ ರೂ. 5000 ಕೋ.ರೂಗಳ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಬಹುದಿತ್ತು ಎಂದು ಹೇಳಿದರು.
ನಾನು ಎಲ್ಲಿಯೋ ಹುಟ್ಟಿದ್ದರು ಕೂಡಾ ಮೂಡುಬಿದಿರೆ ಕ್ಷೇತ್ರದ ಅಭಿವೃದ್ಧಿ ಮಾಡೆಂದು ದೇವರು ನನ್ನನ್ನು ಈ ಕ್ಷೇತ್ರದಲ್ಲಿ ಶಾಸಕನಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಸಿಕ್ಕಿದ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಯಶಸ್ವಿಯಾಗಿ ಮಾಡಿದ್ದೇನೆಂದು ಹೆಮ್ಮೆ ಇದೆ. ಬೆಳುವಾಯಿ ಪಂಚಾಯತ್ ವ್ಯಾಪ್ತಿಯಲ್ಲಿ ರೂ .100 ಕೋಟಿ ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆದಿದೆ ಎಂದ ಅವರು ಇತ್ತೀಚೆಗೆ ತಾನು ಮಾತನಾಡಿದ ವೀಡಿಯೋ ತುಣುಕೊಂದನ್ನು ಹಿಡಿದು ತನ್ನ ತೇಜೋವಧೆ ಮಾಡುವ ಕೆಲಸ ವಿಘ್ನ ಸಂತೋಷಿಗಳಿಂದ ನಡೆಯುತ್ತಿದೆ. ಮುಸ್ಲಿಂರು ಮತ್ತು ಕ್ರಿಶ್ಚಿಯನ್ನರು ನಮಗೆ ಓಟು ಹಾಕುವುದಿಲ್ಲ ಎಂಬ ಭಾವನೆ ಬಿಜೆಪಿಗರಲ್ಲಿದ್ದರೆ, ಎರಡೂ ಸಮಾಜದವರು ನಮಗೆ ಓಟು ಹಾಕುತ್ತಾರೆಂಬ ಭಾವನೆ ಕಾಂಗ್ರೆಸಿಗರಲ್ಲಿದೆ ಎಂದು ನಾನು ಹೇಳಿದ್ದರಲ್ಲಿ ಯಾವುದೇ ತಪ್ಪಿಲ್ಲ. ನಾನು ಜಾತಿ, ಧರ್ಮವನ್ನು ನೋಡದೆ ಎಲ್ಲರ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಯಾವುದೇ ಸಮಾಜ ಅಥವಾ ಜಾತಿಯನ್ನು ನಿಂದಿಸಿಲ್ಲ. ಈ ದೇಶವನ್ನು ಪ್ರೀತಿಸುವ ಪ್ರತಿ ರಾಷ್ಟ್ರಭಕ್ತರನ್ನು ನಾನು ಗೌರವಿಸುತ್ತೇನೆ.
ಮೇಲೆ ಇರುವ ದೇವರು ಹಾಗೂ ನಾನು ನಂಬಿರುವ ಕಟೀಲಿನ ತಾಯಿ ಅವರಿಗೆ ಒಳ್ಳೆ ರೀತಿಯ ಬದುಕನ್ನು ನೀಡಲಿ ಎಂದರು.
ಸನ್ಮಾನ: ಬೆಳುವಾಯಿ ಪಂಚಾಯತ್ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ರೂ 100 ಕೋ.ಅನುದಾನವನ್ನು ಒದಗಿಸಿರುವುದಕ್ಕೆ 7 ನೇ ವಾರ್ಡಿನ ಸದಸ್ಯ ಭರತ್ ಶೆಟ್ಟಿ ನೇತೃತ್ವದಲ್ಲಿ ಗ್ರಾಮಸ್ಥರು ಕೋಟ್ಯಾನ್ ಅವರನ್ನು ಸನ್ಮಾನಿಸಿದರು.
ಗೌರವ: 130 ಕುಟುಂಬಗಳಿಗೆ ಹಕ್ಕುಪತ್ರವನ್ನು ವಿತರಿಸಿರುವ ಫಲಾನುಭವಿಗಳು ಕೋಟ್ಯಾನ್ ಅವರಿಗೆ ಹೂವನ್ನು ನೀಡಿ ಗೌರವಿಸಿದರು.
ಬೆಳುವಾಯಿ ಗ್ರಾ.ಪಂ.ಅಧ್ಯಕ್ಷೆ ಸುಶೀಲಾ, ಉಪಾಧ್ಯಕ್ಷ ರವೀಂದ್ರ ಪೂಜಾರಿ, ಬಿಜೆಪಿ ಮಂಡಲ ಅಧ್ಯಕ್ಷ ಸುನೀಲ್ ಆಳ್ವ, ಪ್ರ.ಕಾರ್ಯದರ್ಶಿಗಳಾದ ಗೋಪಾಲ ಶೆಟ್ಟಿಗಾರ್, ಕೇಶವ ಕರ್ಕೇರಾ,ಮೂಡಾ ಅಧ್ಯಕ್ಷ ಮೇಘನಾಥ ಶೆಟ್ಟಿ, ಭೂನ್ಯಾಯ ಮಂಡಳಿಯ ಸದಸ್ಯ ಹರ್ಷವರ್ಮ ಹೆಗ್ಡೆ ಮಾಲಾಡಿ, ವಿ.ಹಿಂ.ಪ.ತಾಲೂಕು ಕಾರ್ಯಧ್ಯಕ್ಷ ಶ್ಯಾಮ ಹೆಗ್ಡೆ, ಕೆಸರ್ ಗದ್ದೆ ಶಕ್ತಿ ಕೇಂದ್ರದ ಅಧ್ಯಕ್ಷ ಸದಾನಂದ ಶೆಟ್ಟಿ, ಹೋಮಲ್ಕೆ ಶಕ್ತಿ ಕೇಂದ್ರದ ಅಧ್ಯಕ್ಷ ಸೂರಜ್ ಆಳ್ವ ಅತಿಥಿಗಳಾಗಿ ಭಾಗವಹಿಸಿದ್ದರು. ಗ್ರಾ.ಪಂ.ಸದಸ್ಯರು ಉಪಸ್ಥಿತರಿದ್ದರು.
ಬೆಳುವಾಯಿ ಗ್ರಾ.ಪಂ.ನ ಮಾಜಿ ಅಧ್ಯಕ್ಷ ಭಾಸ್ಕರ್ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸೋಮನಾಥ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.ಶಿವರಾಮ ಹೆಗ್ಡೆ ವಂದಿಸಿದರು.
0 Comments