ಮಂಗಳೂರು: ತೆಂಕುತಿಟ್ಟು ಯಕ್ಷಗಾನ ರಂಗದ ದಿಗ್ಗಜ ಕಲಾವಿದ ಹಾಗೂ ಮಾಜಿ ಶಾಸಕ ಕುಂಬಳೆ ಸುಂದರ್ ರಾವ್ (90) ಬುಧವಾರ ಮುಂಜಾನೆ ಮಂಗಳೂರಿನ ಪಂಪ್ ವೆಲ್ ಬಳಿಯ ತಮ್ಮ ಸ್ವಗೃಹದಲ್ಲಿ ನಿಧನರಾದರು.
ಕೇರಳದ ಕುಂಬಳೆಯಲ್ಲಿ 1934ರ ಮಾರ್ಚ್ 20ರಂದು ಜನಿಸಿದ ಕುಂಬಳೆ ಸುಂದರ್ ರಾವ್ ಬಾಲ್ಯದಲ್ಲಿಯೇ ಯಕ್ಷ ರಂಗದಲ್ಲಿ ತೊಡಗಿಸಿಕೊಂಡವರು. ಇವರು ಸುರತ್ಕಲ್, ಧರ್ಮಸ್ಥಳ ಹಾಗೂ ಈರಾ ಯಕ್ಷಗಾನ ಮೇಳಗಳಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸಿದ್ದರು. ಕೇವಲ ಕಲಾರಂಗದಲ್ಲಿ ಅಲ್ಲದೇ ರಾಜಕೀಯ ಕ್ಷೇತ್ರದಲ್ಲೂ ಹೆಸರು ಮಾಡಿದ್ದಾರೆ. 1994 ರಿಂದ 99 ರವರೆಗೆ ಬಿಜೆಪಿಯಿಂದ ಸುರತ್ಕಲ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಸೇವೆ ಸಲ್ಲಿಸಿದ್ದರು.
ಕರ್ನಾಟಕ ರಾಜ್ಯ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಕುಂಬಳೆ ಸುಂದರ್ ರಾವ್ ಪತ್ನಿ ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.
ಗುರುವಾರ ಇವರ ಅಂತ್ಯಸಂಸ್ಕಾರ ನೆರವೇರಲಿದ್ದು ಮಂಗಳೂರು ಪಂಪ್ ವೆಲ್ ಬಳಿಯ ನಿವಾಸದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
0 Comments