ಮೂಡುಬಿದಿರೆ: ಸಮಾಜ ಮಂದಿರ ಸಭಾ (ರಿ.) ಮೂಡುಬಿದಿರೆ ಇದರ ೭೫ನೇ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವ ಸೆ. 26ರಿಂದ 30ರವರೆಗೆ ಮೂಡುಬಿದಿರೆ ಸಮಾಜಮಂದಿರದಲ್ಲಿ ಸಾಯಂಕಾಲ 7 ಗಂಟೆಗೆ ಪ್ರತೀ ದಿನ ಪ್ರಾರಂಭಗೊಳ್ಳಲಿದೆ ಎಂದು ಸಮಾಜ ಮಂದಿರ ಸಭಾದ ಅಧ್ಯಕ್ಷ ಕೆ. ಅಭಯಚಂದ್ರ ಜೈನ್ ತಿಳಿಸಿದ್ದಾರೆ.
ಸೆ. 26ರಂದು ಮಾಜಿ ಮುಖ್ಯಮಂತ್ರಿ ಡಾ. ಎಂ. ವೀರಪ್ಪ ಮೊಯಿಲಿ ಉದ್ಘಾಟನೆಯನ್ನು ನೆರವೇರಿಸಲಿದ್ದು, ಮಾಜಿ ಸಚಿವ ಸಮಾಜಮಂದಿರ ಸಭಾದ ಅಧ್ಯಕ್ಷ ಕೆ. ಅಭಯಚಂದ್ರ ಜೈನ್ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ನಂತರ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಹಟ್ಟಿಯಂಗಡಿ ರಾಮಭಟ್ಟ ವಿರಸಿದ ಶರಸೇತು ಬಂಧ ಯಕ್ಷಗಾನ ತಾಳಮದ್ದಳೆ ಪ್ರದರ್ಶನಗೊಳ್ಳಲಿದೆ.
ಸೆ. 27ರಂದು ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ ಅಧ್ಯಕ್ಷತೆಯಲ್ಲಿ ಶಿಕ್ಷಣ ತಜ್ಞ ಡಾ. ಮಹಾಬಲೇಶ್ವರ ರಾವ್ ಶಾಲಾ ಪಠ್ಯಪುಸ್ತಕಗಳ ರಚನೆ-ಸಮಸ್ಯೆಗಳು, ಸವಾಲುಗಳು ವಿಷಯದಲ್ಲಿ ಉಪನ್ಯಾಸ ನೀಡಲಿದ್ದಾರೆ. ಸಭಾ ಕಾರ್ಯಕ್ರಮದ ನಂತರ ಮೂಡುಬಿದಿರೆ ಆರಾಧನಾ ನೃತ್ಯ ಕೇಂದ್ರದ ನಾಟ್ಯವಿದೂಷಿ ಶ್ರೀಮತಿ ಸುಖದಾ ಬರ್ವೆ ಇವರ ಶಿಷ್ಯರಿಂದ ನೃತ್ಯ ಸಿಂಚನ ನಡೆಯಲಿದೆ.
ಸೆ. 28ರಂದು ವರ್ಧಮಾನ ಪ್ರಶಸ್ತಿ ಪೀಠ ಇದರ 2021ನೇ ಸಾಲಿನ ವರ್ಧಮಾನ ಪ್ರಶಸ್ತಿ ಪ್ರದಾನ ಮೂಡುಬಿದಿರೆ ಜೈನ ಮಠದ ಸ್ವಸ್ತಿ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರ ಸಾನಿಧ್ಯದೊಂದಿಗೆ ನಡೆಯಲಿದೆ. ಪೀಠದ ಅಧ್ಯಕ್ಷ ಎಸ್.ಡಿ. ಸಂಪತ್ ಸಾಮ್ರಾಜ್ಯ ಅಧ್ಯಕ್ಷತೆಯಲ್ಲಿನ ಬೆಂಗಳೂರಿನ ಡಾ. ಗಜಾನನ ಶರ್ಮ ಇವರಿಗೆ ವರ್ಧಮಾನ ಸಾಹಿತ್ಯ ಪ್ರಶಸ್ತಿ ಹಾಗೂ ಚಿಕ್ಕಮಗಳೂರಿನ ಡಾ. ಹೆಚ್. ಎಸ್. ಸತ್ಯನಾರಾಯಣ ಇವರಿಗೆ ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ ಪ್ರದಾನ ನಡೆಯಲಿದೆ. ಸಭಾಕಾರ್ಯಕ್ರಮದ ನಂತರ ಪ್ರಸಿದ್ಧ ಕಲಾವಿದರ ಕೂಡುವಿಕೆಯೊಂದಿಗೆ ಯಕ್ಷಗಾನ, ನಾಟ್ಯವೈಭವ ಜರಗಲಿದೆ.
ಸೆ. 29ರಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೇಣುಗೋಪಾಲ ಶೆಟ್ಟಿ ಕೆ. ಇವರ ಅಧ್ಯಕ್ಷತೆಯಲ್ಲಿ ಲೇಖಕ ಅರವಿಂದ ಚೊಕ್ಕಾಡಿ ಇವರಿಂದ ಮಾಧ್ಯಮಗಳು ಮತ್ತು ಸಾಮಾಜಿಕ ಸ್ವಾಸ್ಥ್ಯ ಎಂಬ ವಿಷಯದಡಿ ಉಪನ್ಯಾಸ ನಡೆಯಲಿದೆ. ನಂತರ ಮಂಗಳೂರಿನ ಸನಾತನ ನಾಟ್ಯಾಲಯ ಇದರ ನಾಟ್ಯಕಲಾ ವಿದೂಷಿ ಶ್ರೀಮತಿ ಶಾರದಾ ಮಣಿಶೇಖರ್ ಇವರ ಶಿಷ್ಯರಿಂದ ಸನಾತನ ನಾಟ್ಯಾಂಜಲಿ ಜರಗಲಿದೆ.
ಸೆ. 30ರಂದು ಮೂಡುಬಿದಿರೆ ಶಾಸಕ ಉಮಾನಾಥ ಎ. ಕೋಟ್ಯಾನ್ ಅಧ್ಯಕ್ಷತೆಯಲ್ಲಿ ಜಾನಪದ ವಿದ್ವಾಂಸ ಡಾ. ಗಣನಾಥ ಶೆಟ್ಟಿ ಎಕ್ಕಾರು ತುಳು ಸಂಸ್ಕೃತಿಯ ಶಕ್ತಿ ವಿಷಯದಡಿ ಉಪನ್ಯಾಸ ನೀಡಲಿದ್ದಾರೆ. ನಂತರ ಟಾಪ್ ಎಂಟರ್ ಟೈನರ್‍ಸ್ ಡಾನ್ಸ್ ಅಕಾಡೆಮಿ ಇವರಿಂದ ಎಂ. ರೂಪೇಶ್ ಕುಮಾರ್ ನಿರ್ದೇಶನದಲ್ಲಿ ನೃತ್ಯ ವೈವಿಧ್ಯ ಜರಗಲಿದೆ.
0 Comments