ಮಂಗಳೂರು: ಮಂಗಳೂರಿನ ಪಡೀಲ್ ಕಣ್ಣೂರು ರಾಷ್ಟ್ರೀಯ ಹೆದ್ದಾರಿಯ ಕೊಡಕ್ಕಲ್ ಎಂಬಲ್ಲಿ ಸಾರ್ವಜನಿಕವಾಗಿ ಪೊಲೀಸರಿಗೆ ಅವಾಚ್ಯವಾಗಿ ನಿಂದಿಸಿದ ಬೈಕ್ ಸವಾರರ ಮೇಲೆ ಕ್ರಿಮಿನಲ್ ಕೇಸ್ ದಾಖಲಾಗಿದೆ.
ಶುಕ್ರವಾರದಂದು ಈ ಘಟನೆ ನಡೆದಿದ್ದು, ಎಸ್.ಡಿ.ಪಿ.ಐ ಪಕ್ಷ ಆಯೋಜಿಸಿದ್ದ ಜನಾಧಿಕಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವ್ಯಕ್ತಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಮಂಗಳೂರು ಪೂರ್ವ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪ ನಿರೀಕ್ಷಕ ಚಂದ್ರಶೇಖರ್ ಬಿ ಅವರು ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಈ ದೂರಿನ ಆಧಾರದಲ್ಲಿ ಪೊಲೀಸರು ಪ್ರಥಮ ಮಾಹಿತಿ ವರದಿಯನ್ನು ದಾಖಲಿಸಿಕೊಂಡಿದ್ದು, ಆರೋಪಿಗಳ ವಿರುದ್ಧ IPC ಸೆಕ್ಷನ್ 143, 353, 504,1498ರ ಅಡಿಯಲ್ಲಿ ದೂರು ದಾಖಲಿಸಲಾಗಿದೆ.
ಪಡೀಲ್ ಕಡೆಯಿಂದ ಬಂದ ಕೆ.ಟಿ.ಎಂ ಬೈಕ್ ನ ಸವಾರ, ಸಹ ಸವಾರ, ಸ್ಕೂಟರ್ ನ ಸವಾರ , ಸಹ ಸವಾರ ಮತ್ತು ಕಾರ್ ನಲ್ಲಿದ್ದ ಸವಾರ ಹಾಗೂ ಇತರರು, ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿಗಳಿಗೆ ಹಾಗೂ ಪೊಲೀಸ್ ಇಲಾಖೆಯನ್ನು ಉದ್ದೇಶಿಸಿ ಬ್ಯಾರಿ ಭಾಷೆಯಲ್ಲಿ, "ಪೋಡಾ ಪುಲ್ಲೆ ಪೊಲೀಸೆ". "ನಾಯಿಂಡೆ ಮೋನೆ ಪೊಲೀಸೆ" ಎಂದು ನಿಂದಿಸಿದ್ದರು.
ಅಲ್ಲದೆ, ಅತೀ ವೇಗವಾಗಿ ವಾಹನಗಳನ್ನು ಚಲಾಯಿಸಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದ ದೂರುದಾರರು ಮತ್ತು ಪೊಲೀಸ್ ಸಿಬ್ಬಂದಿಯವರ ಮೈಮೇಲೆ ವಾಹನ ಹಾಯಿಸುವಂತೆ ಬಂದರು. ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ಪ್ರಾಣಾಪಾಯದಿಂದ ತಪ್ಪಿಸಿಕೊಂಡಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆ.
ಕರ್ತವ್ಯನಿರತ ಪಿರ್ಯಾದುದಾರಿಗೆ ಮತ್ತು ಸಿಬ್ಬಂದಿಗಳಿಗೆ ಕರ್ತವ್ಯ ನಿರ್ವಹಿಸಲು ಅಡೆತಡೆಯುಂಟು ಮಾಡಿ , ನಿಂದಿಸುತ್ತಾ ಕರ್ತವ್ಯದಲ್ಲಿರುವ ಪೋಲಿಸರ ಮಾನಸಿಕ ಸ್ಥೆರ್ಯ ಹಾಳು ಮಾಡಿ ಪೊಲೀಸ್ ಕರ್ತವ್ಯ ನಿರ್ವಹಿಸಲು ಅಡ್ಡಿ ಪಡಿಸಿರುವ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರುದಾರರು ವಿನಂತಿಸಿಕೊಂಡಿದ್ದಾರೆ.
0 Comments