ಅಭಿವೃದ್ಧಿ ಕಾರ್ಯಗಳಿಗೆ ಬೆಂಬಲವಿದೆ: ಮಾಜಿ ಸಚಿವ ಅಭಯಚಂದ್ರ ಜೈನ್

ಜಾಹೀರಾತು/Advertisment
ಜಾಹೀರಾತು/Advertisment

 

ಮೂಡುಬಿದಿರೆ: ಇಲ್ಲಿನ ಜನರ ಬಹು ವರ್ಷಗಳ ಕನಸಾಗಿರುವ ತಾಲೂಕು ರಚನೆ, ಮಿನಿ ವಿಧಾನಸೌಧ ಇದೀಗ ಸುಸಜ್ಜಿತವಾಗಿ ನಿರ್ಮಾಣಗೊಂಡು ಸಜ್ಜಾಗಿದ್ದು ನಾಳೆ (27.04.2022) ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ.

ಶಾಸಕ ಉಮಾನಾಥ್ ಕೋಟ್ಯಾನ್ ಮುಂದಾಳತ್ವದಲ್ಲಿ, ಇಂತಹ ಜನಪರವಾದ' ಉತ್ತಮ ಅಭಿವೃದ್ಧಿ ಕಾರ್ಯಗಳು ನಡೆದಿರುವುದಕ್ಕೆ  ಬೆಂಬಲವಿದೆ ಎಂದು ಮಾಜಿ ಶಾಸಕ ಅಭಯಚಂದ್ರ ಜೈನ್ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. 

ಅವರು ಇಂದು ಸಮಾಜ ಮಂದಿರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. 

ನಾನು ಮತ್ತು ಮಾಜಿ ಸಚಿವರಾದ ಕೆ. ಅಮರನಾಥ ಶೆಟ್ಟಿ ಅವರು ಕಾದಿರಿಸಿದ ಜಾಗದಲ್ಲಿ ಇಂದು ಸುಸಜ್ಜಿತವಾದ ತಾಲೂಕು ಆಡಳಿತ ಸೌಧ ನಿರ್ಮಾಣವಾಗಿದೆ. ಈ ಭಾಗದ ಜನರ ಬಹುಕಾಲದ ಬೇಡಿಕೆಯಾಗಿದ್ದ  ತಾಲೂಕು ಆಡಳಿತ ಸೌಧ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮೂಡುಬಿದಿರೆಗೆ ತಾಲೂಕು ಘೋಷಣೆಯಾಗಿ ಆ ಬಳಿಕ ಕಂದಾಯ ಸಚಿವರಾಗಿದ್ದ ಆರ್ ವಿ. ದೇಶಪಾಂಡೆ ಅವರು ಈ ತಾಲೂಕು ಸೌಧಕ್ಕೆ ಶಿಲಾನ್ಯಾಸ ನೆರವೇರಿಸಿದ್ದರು. ನಾಳಿನ ಉದ್ಘಾಟನಾ  ಶುಭ ಸಮಾರಂಭದಲ್ಲಿ ನಾನು ಭಾಗವಹಿಸುತ್ತೇನೆ ಎಂದರು. 

ಅಭಿವೃದ್ಧಿ ಕೆಲಸವನ್ನು ಯಾರೇ ಮಾಡಿದರೂ ನಾನು ಅಭಿನಂದಿಸುತ್ತೇನೆ. ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಇಲ್ಲ. ನಾನು ಸಚಿವನಾಗಿದ್ದ ಸಂದರ್ಭದಲ್ಲಿ ಮೂಡುಬಿದಿರೆಗೆ ಒಳಚರಂಡಿ ಯೋಜನೆಗಾಗಿ ಸಾಕಷ್ಟು ಶ್ರಮಿಸಿದ್ದೆ. ಅದು ಸಾಧ್ಯವಾಗಿಲ್ಲ. ಇದೀಗ ರಾಜ್ಯ ಸರಕಾರದಲ್ಲಿ ಸಾಕಷ್ಟು ಅನುದಾನವಿದ್ದು ಮಾನ್ಯ ಮುಖ್ಯಮಂತ್ರಿಯವರು ಮೂಡುಬಿದಿರೆಗೆ ಅತೀ ಅವಶ್ಯವಾಗಿರುವ ಒಳಚರಂಡಿ ಯೋಜನೆಗೆ ಅನುದಾನ ಬಿಡುಗಡೆಗೊಳಿಸಬೇಕೆಂದು ಅವರು ಆಗ್ರಹಿಸಿದರು.

ಮೂಡುಬಿದಿರೆಯಲ್ಲಿ ಸುಮಾರು 115ವರ್ಷಗಳ ಇತಿಹಾಸವಿರುವ ಪ್ರವಾಸಿಮಂದಿರವನ್ನು ಧ್ವಂಸಗೊಳಿಸಿ ಅಲ್ಲಿ ನೂತನ ಪ್ರವಾಸಿಮಂದಿರ ನಿರ್ಮಿಸುವುದಕ್ಕೆ ನನ್ನ ವಿರೋಧವಿದೆ, ಈಗಿರುವ ಪ್ರವಾಸಿ ಮಂದಿರಗಳಲ್ಲಿ ಯಾವ ಸಚಿವನಾಗಲೀ, ಶಾಸಕನಾಗಲೀ, ಮುಖ್ಯಮಂತ್ರಿಯಾಗಲೀ ತಂಗುವುದಿಲ್ಲ. ಅವರೆಲ್ಲಾ ಐಶಾರಾಮಿ ಹೋಟೆಲ್ ಗಳಲ್ಲೇ ವಾಸ್ತವ್ಯ ಹೂಡುತ್ತಾರೆ. ಪ್ರವಾಸಿಮಂದಿರಗಳ ಅಭಿವೃದ್ಧಿಯ ಹೆಸರಿನಲ್ಲಿ ಕೋಟಿ ಕೋಟಿ ಅನುದಾನ ಒದಗಿಸುವುದು ಭ್ರಷ್ಟಾಚಾರಕ್ಕೆ ಕಾರಣವಾಗುತ್ತದೆ. ಸರಕಾರದ ಹಣ ಯಾವುದೇ ರೀತಿಯಲ್ಲೂ ವ್ಯರ್ಥವಾಗಬಾರದೆಂದು ಅವರು ತಿಳಿಸಿದರು. 

ಮೂಡುಬಿದಿರೆ ಪುರಸಭೆಯಲ್ಲಿ 11 ಜನ ಕಾಂಗ್ರೆಸ್ ಬೆಂಬಲಿತ ಸದಸ್ಯರಿದ್ದು ಈ ಸದಸ್ಯರು ಪ್ರತಿನಿಧಿಸುವ ವಾರ್ಡ್‌ಗಳನ್ನು ಆಡಳಿತಾರೂಢ ಬಿಜೆಪಿ ಕಡೆಗಣಿಸುತ್ತಿದೆ. ಸರಕಾರದಿಂದ ಬಂದ ಅನುದಾನವನ್ನು ಹಂಚುವಲ್ಲಿ ತಾರತಮ್ಯ ಮಾಡುತ್ತಿದೆ. 2021ನೇ ಸಾಲಿನ ನಗರೋತ್ಥಾನ ಅನುದಾನದಲ್ಲಿ 10ಕೋಟಿ ರೂ. ಅನುದಾನ ಬಂದಿದ್ದು ಇದರಲ್ಲಿ ಕಾಂಗ್ರೆಸ್ ಸದಸ್ಯರು ಪ್ರತಿನಿಧಿಸುವ ವಾರ್ಡ್‌ಗಳಿಗೆ ಶೇ೦ರಷ್ಟು ಅನುದಾನವನ್ನು ಮಾತ್ರ ಒದಗಿಸಿ ಮೂಡುಬಿದಿರೆ ಪುರಸಭೆಯ ಅರ್ಧದಷ್ಟು ವ್ಯಾಪ್ತಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಅವರು ಈ ಬಗ್ಗೆ ಜಿಲ್ಲಾಧಿಕಾರಿಯವರಿಗೆ ದೂರು ನೀಡಿರುವುದಾಗಿ ತಿಳಿಸಿದರು.

ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ವಲೇರಿಯನ್ ಸಿಕ್ವೆರಾ, ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಪುರಸಭಾ ಸದಸ್ಯರಾದ ಪಿ.ಕೆ. ಥೋಮಸ್, ಇಕ್ವಾಲ್ ಕರೀಂ, ಪುರಂದರ ದೇವಾಡಿಗ, ಸುರೇಶ್ ಕೋಟ್ಯಾನ್, ಸುರೇಶ್ ಪ್ರಭು, ಹಿಮಾಯತುಲ್ಲಾ ಕೊರಗಪ್ಪ, ರೂಪಾ ಎಸ್. ಶೆಟ್ಟಿ ಮಮತಾ ಆನಂದ್, ಶಕುಂತಳಾ ಹರೀಶ್, ವಕ್ತಾರ ರಾಜೇಶ್ ಕಡಲಕೆರೆ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Post a Comment

0 Comments