ಮೈಸೂರು: ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಇಂದು ಬುಧವಾರ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಏನೇ ಹೇಳಿದರೂ ರಾಜ್ಯದಲ್ಲಿ ಬಿಜೆಪಿ ಪರವಾದ ಅಲೆಯಿದ್ದು ನೂರಕ್ಕೆ ನೂರು ಮುಂದಿನ ಚುನಾವಣೆಯಲ್ಲಿ ಸರಳ ಬಹುಮತದಿಂದ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದರು.
ಮೂರ್ನಾಲ್ಕು ತಂಡಗಳಾಗಿ ಪ್ರವಾಸ: ಏಪ್ರಿಲ್ 1ರ ನಂತರ ಮೂರ್ನಾಲ್ಕು ತಂಡಗಳಾಗಿ ರಾಜ್ಯದಲ್ಲಿ ಬಿಜೆಪಿ ನಾಯಕರು ಪ್ರವಾಸ ಮಾಡಲಿದ್ದು, ಜನಬೆಂಬಲ ಯಾವ ರೀತಿ ಬಿಜೆಪಿ ಪರವಾಗಿದೆ ಎಂಬುದು ಗೊತ್ತಾಗುತ್ತದೆ ಎಂದರು.
ಅವಧಿಪೂರ್ವ ಚುನಾವಣೆ ಇಲ್ಲ, ಸಿಎಂ ಬದಲಾವಣೆಯಿಲ್ಲ .ಏಪ್ರಿಲ್ 1ರಂದು ರಾಜ್ಯಕ್ಕೆ ಅಮಿತ್ ಶಾ ಅವರು ಆಗಮಿಸಲಿದ್ದಾರೆ. ಮುಂದಿನ ಚುನಾವಣೆ ಮುಗಿಯುವವರೆಗೂ ಬಸವರಾಜ ಬೊಮ್ಮಾಯಿಯವರೇ ಮುಖ್ಯಮಂತ್ರಿಯಾಗಿರಲಿದ್ದು, ಅವರ ನೇತೃತ್ವದಲ್ಲಿಯೇ ಚುನಾವಣೆ ನಡೆಯುತ್ತದೆ. ರಾಜ್ಯದಲ್ಲಿ ಅವಧಿಪೂರ್ವ ಚುನಾವಣೆಯಿಲ್ಲ, ಊಹಾಪೋಹಗಳಿಗೆ ಆಸ್ಪಾದವಿಲ್ಲ ಎಂದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ವರ್ಗಗಳನ್ನು ಸಂಪೂರ್ಣ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನವನ್ನು ಬಿಜೆಪಿ ನಾಯಕರು ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಮಾಡಲಿದ್ದಾರೆ. ಮಹಿಳಾ ಸಬಲೀಕರಣ ಮೂಲಕ ಸಂಘಟನೆಯನ್ನು ಬಲಪಡಿಸುವ ಪ್ರಯತ್ನ ಮಾಡುತ್ತದೆ, ಕಾಂಗ್ರೆಸ್ ನಾಯಕರು ಹೇಳುವ ಮಾತುಗಳಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದರು.
0 Comments