ಮೂಡುಬಿದಿರೆ: ಜಗತ್ತಿನಲ್ಲಿ ಪ್ರೇಮಭಾವವಿದ್ದಾಗ ಮಾತ್ರ ವಿಶ್ವಶಾಂತಿ ಕಲ್ಯಾಣ ಸಾಧ್ಯವಾಗುತ್ತದೆ. 'ವಸುದೈವ ಕುಟುಂಬಕ' ಎನ್ನುವುದು ನಮ್ಮ ಸಂಸ್ಕೃತಿಯಾಗಿದ್ದು ಭಾರತ ಈ ನಿಟ್ಟಿನಲ್ಲಿ ಮುನ್ನಡೆದಿದ್ದು ನಮ್ಮೆಲ್ಲರ ಮೇಲೆ ಜಾಗತಿಕವಾಗಿ ಬಹಳಷ್ಟು ನಿರೀಕ್ಷೆಗಳಿವೆ. ಹಾಗಾಗಿ ಬದುಕು ಬದುಕಲು ಬಿಡು, ಅಹಿಂಸೆಯೇ ಪರಮಧರ್ಮ, ಪರೋಪಕಾರವೇ ಸೇವೆ ಎನ್ನುವ ಮನೋಧರ್ಮದೊಂದಿಗೆ ನಾವು ಜೀವನದಲ್ಲಿ ಸಫಲತೆ ಕಾಣಬೇಕಾಗಿದೆ ಎಂದು ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.
ಅವರು ಸೋಮವಾರ ಸಂಜೆ ಕಾರ್ಕಳ ಉತ್ಸವಕ್ಕೆ ತೆರಳುವ ಹಾದಿಯಲ್ಲಿ ಜೈನಕಾಶಿ ಮೂಡುಬಿದಿರೆಗೆ ಪ್ರಥಮ ಭಾರಿಗೆ ಭೇಟಿ ನೀಡಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಗೌರವ ಸ್ವೀಕರಿಸಿ, ಬಸದಿಗಳ ನಾಮಫಲಕವನ್ನು ಸಾಂಕೇತಿಕವಾಗಿ ಅನಾವರಣಗೊಳಿಸಿ ಮಾತನಾಡಿದರು. ಶ್ರೀ ಜೈನಮಠ, ಸಾವಿರ ಕಂಬದ ಬಸದಿಯನ್ನು ಸಂದರ್ಶಿಸಿ, ಪಾರ್ಶ್ವನಾಥ ಸ್ವಾಮಿ, ಕೂಷ್ಮಾಂಡಿನಿ ದೇವಿಗೆ ಆರತಿ, ಅರ್ಘ್ಯ ಅರ್ಪಿಸಿದರು. ಬಳಿಕ ಧವಲತ್ರಯ ಮೂಲ ಗ್ರಂಥಗಳು, ಅಮೂಲ್ಯ ಜಿನಬಿಂಬಗಳ ಸಿದ್ಧಾಂತ ದರ್ಶನಗೈದರು.
ರಾಜ್ಯಪಾಲರನ್ನು ಜೈನಮಠದ ಪರವಾಗಿ ಪಟ್ನಶೆಟ್ಟಿ ಸುಧೇಶ್ ಕುಮಾರ್ ಹಾರಾರ್ಪಣೆಯೊಂದಿಗೆ ಸ್ವಾಗತಿಸಿದರು. ಶ್ರೀ ಜೈನಮಠಕ್ಕೆ ಭೇಟಿ ನೀಡಿದ ರಾಜ್ಯಪಾಲರು. ಉಕ್ರೇನ್ ಸಮರದ ವಿಪ್ಲವಗಳ ನಡುವೆ ಶಾಂತಿಯಿಂದ ಮಾತ್ರ ಮೋಕ್ಷ ಸಾಧ್ಯ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ವಾಜಪೇಯಿ, ಅಡ್ವಾಣಿಯವರಂತಹ ಮುತ್ಸದ್ದಿಗಳ ಒಡನಾಟದಲ್ಲಿ ವ್ಯಕ್ತಿತ್ವ ಅರಳಿಸಿಕೊಂಡ ಥಾವರ್‌ಚಂದ್ ಗೆಹ್ಲೋಟ್ ಮುಂದಿನ ದಿನಗಳಲ್ಲಿ ಉಪರಾಷ್ಟ್ರಪತಿ, ರಾಷ್ಟ್ರಪತಿಯಾಗಿ ದೇಶ ಸೇವೆ ಮಾಡುವಂತಾಗಲಿ ಎಂದು ಶ್ರೀಗಳವರು ಭಾವನೆ ವ್ಯಕ್ತಪಡಿಸಿದರು.
ತಾಳೆಗ್ರಂಥ ಸಂರಕ್ಷಣೆಗೆ ಮನವಿ:
ಜೈನಕಾಶಿ ಮೂಡುಬಿದಿರೆಯ ರಮಾರಾಣಿ ಶೋಧ ಸಂಸ್ಥಾನದಲ್ಲಿ ಜಾಗತಿಕ ಮಹತ್ವವಿರುವ ಐದು ಸಾವಿರದಷ್ಟು ಪ್ರಾಚ್ಯ ತಾಡಪತ್ರ, ಓಲೆಗರಿಗಳ, ಐತಿಹಾಸಿಕ ಸಂಪತ್ತಿದೆ. ಅವುಗಳ ಸಂರಕ್ಷಣೆ, ಸಂಶೋಧನೆ, ಪ್ರಕಾಶನ, ಅಂತಾರಾಷ್ಟ್ರೀಯ ಮಟ್ಟದ ವಿಚಾರ ಗೋಷ್ಠಿ, ಸಂರಕ್ಷಣ ಭವನ ಹೀಗೆ ೩.೮ ಕೋಟಿ ರೂ ಅಂದಾಜು ವೆಚ್ಚದ ಮಹತ್ವದ ಯೋಜನೆ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಈ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರಕಾರ ಸ್ಪಂದಿಸುವಂತೆ ಸೂಚಿಸಲು ರಾಜ್ಯಪಾಲರಿಗೆ ಶ್ರೀಗಳವರು ಮನವಿ ಸಲ್ಲಿಸಿದರು.
ಬಳಿಕ ಸಾವಿರ ಕಂಬದ ಬಸದಿಗೆ ಭೇಟಿಯಿತ್ತ ರಾಜ್ಯಪಾಲರು ಚಂದ್ರಪ್ರಭ ಸ್ವಾಮಿಯ ದರ್ಶನ ಆರತಿ ಪಡೆದರು. ವಿದ್ಯುದ್ದೀಪಾಲಂಕೃತ ಬಸದಿಯ ಭೈರಾದೇವಿ ಮಂಟಪದಲ್ಲಿ ಕಲಾತ್ಮಕ, ಕುಸುರಿ ಕಲೆಯ ಶಿಲಾಸ್ತಂಭಗಳ ಕುರಿತು ಶ್ರೀಗಳವರು ರಾಜ್ಯಪಾಲರಿಗೆ ವಿವರಿಸಿದರು. ಮಹಾಕವಿ ರತ್ನಾಕರವರ್ಣಿ ಈ ಬಸದಿಯಲ್ಲಿ ಕಾವ್ಯ ರಚನೆಗೆ ತೊಡಗಿಕೊಂಡದ್ದು, ರಾಷ್ಟçಪತಿ ಭವನದ ವಿನ್ಯಾಸದ ಸಂದರ್ಭದಲ್ಲೂ ಬಸದಿಯ ಕಂಬಗಳ ವಿನ್ಯಾಸವನ್ನು ಪರಿಶೀಲಿಸಿರುವುದನ್ನು ಶ್ರೀಗಳವರು ರಾಜ್ಯಪಾಲರ ಗಮನಕ್ಕೆ ತಂದರು.
ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್, ಉಪಾಧ್ಯಕ್ಷೆ ಸುಜಾತಾ ಶಶಿಕಿರಣ್, ಮುಖ್ಯಾಧಿಕಾರಿ ಇಂಧು ರಾಜ್ಯಪಾಲರನ್ನು ಗೌರವಿಸಿದರು. ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಎಂಸಿಎಸ್. ಬ್ಯಾಂಕ್ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್, ಎಪಿಎಂಸಿ ಅಧ್ಯಕ್ಷ ಕೆ.ಕೃಷ್ಣರಾಜ ಹೆಗ್ಡೆ, ಪಂಡಿತ್ ರೆಸಾರ್ಟ್ನ ಲಾಲ್ ಗೋಯೆಲ್, ಚೌಟರ ಅರಮನೆಯ ಕುಲದೀಪ್, ಬಸದಿಗಳ ಮೊಕ್ತೇಸರ ಆನಡ್ಕ ದಿನೇಶ್ ಕುಮಾರ್, ಆದರ್ಶ್ ಚೌಟರ ಅರಮನೆ , ಜೈನ್ ಮಿಲನ್ ಅಧ್ಯಕ್ಷ ನಮಿರಾಜ್ ಜೈನ್, ಮಾಜಿ ಅಧ್ಯಕ್ಷೆ ಶ್ವೇತಾ ಜೈನ್ ಮತ್ತಿತತರು ಉಪಸ್ಥಿತರಿದ್ದರು.
ಸಂಜೆ ೪.ರ ವೇಳೆಗೆ ಬಸದಿಗಳ ಸಂದರ್ಶನ ಮುಗಿಸಿದ ರಾಜ್ಯಪಾಲರು ಬಳಿಕ ಕೊಡ್ಯಡ್ಕ ಶ್ರೀ ಅನ್ನಪೂರ್ಣೇಶ್ವರೀ ದೇವಸ್ಥಾನಕ್ಕೆ ಭೇಟಿ ನೀಡಿ ಅಲ್ಲಿಂದ ಕಾರ್ಕಳ ಉತ್ಸವಕ್ಕೆ ತೆರಳಿದರು.
0 Comments