ಭಾಷೆಯ ಅಭಿಮಾನ ಘೋಷಣೆಗಳಿಗೆ ಸೀಮಿತವಾಗದಿರಲಿ : ಅರವಿಂದ ಚೊಕ್ಕಾಡಿ

ಭಾಷೆಯ ಅಭಿಮಾನ ಘೋಷಣೆಗಳಿಗೆ ಸೀಮಿತವಾಗದಿರಲಿ : ಅರವಿಂದ ಚೊಕ್ಕಾಡಿ

ಮೂಡುಬಿದಿರೆ: ಕನ್ನಡ ಭಾಷೆಯ ಅಭಿಮಾನ ಕೇವಲ ಘೋಷಣೆಗಳಿಗೆ ಸೀಮಿತವಾಗದೆ, ನಮ್ಮ ಆಲೋಚನೆ, ಮಾತು ಮತ್ತು ನಡವಳಿಕೆಯಲ್ಲಿ ಪ್ರತಿಫಲಿಸಬೇಕು. ಕನ್ನಡವನ್ನು ಉಳಿಸುವುದಕ್ಕಿಂತ ದಿನನಿತ್ಯದ ಬದುಕಿನಲ್ಲಿ ಬಳಸುವ ಮೂಲಕ ಬೆಳೆಸಬೇಕು ಎಂದು ಚಿಂತಕ ಅರವಿಂದ ಚೊಕ್ಕಾಡಿ ಅಭಿಪ್ರಾಯಪಟ್ಟರು.
ಅವರು ಭಾನುವಾರ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಕನ್ನಡ ಸಂಘ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ನವೆಂಬರ್ 1 ಕನ್ನಡ ರಾಜ್ಯೋತ್ಸವವಲ್ಲ, ಕರ್ನಾಟಕ ರಾಜ್ಯೋತ್ಸವ. ಇದು ಕರ್ನಾಟಕ ರಾಜ್ಯದ ರಚನೆಯ ಸ್ಮರಣಾರ್ಥ ಆಚರಿಸುವ ದಿನ. ಕನ್ನಡಕ್ಕೆ ಸುಮಾರು ಎರಡರಿಂದ ಎರಡೂವರೆ ಸಾವಿರ ವರ್ಷಗಳ ದಾಖಲಿತ ಇತಿಹಾಸವಿದೆ. ಕನ್ನಡ ರಾಜ್ಯದ ಅಸ್ಮಿತೆ ಮತ್ತು ಅಸ್ತಿತ್ವದ ಪ್ರಮುಖ ಕೊಂಡಿಯಾಗಿದೆ. ಭಾಷೆಯನ್ನು ಪೆಟ್ಟಿಗೆಯಲ್ಲಿಟ್ಟು ಸಂರಕ್ಷಿಸುವ ವಸ್ತುವಿನಂತೆ ಕಾಣದೆ, ನಿರಂತರ ಬಳಕೆಯ ಮೂಲಕ ಜೀವಂತವಾಗಿಡಬೇಕು ಎಂದರು.
ನಂತರ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ, ತುಳು ಸೇರಿದಂತೆ ಎಲ್ಲ ಭಾಷೆ ಮತ್ತು ಸಂಸ್ಕೃತಿಗಳನ್ನು ಗೌರವಿಸುತ್ತಲೇ ಕನ್ನಡದ ಪ್ರೀತಿ ಮತ್ತು ಬದ್ಧತೆಯನ್ನು ಬೆಳೆಸಿಕೊಳ್ಳಬೇಕು. ಆಳ್ವಾಸ್ ಸಂಸ್ಥೆ ಕಳೆದ 30 ವರ್ಷಗಳಿಂದ ಆಳ್ವಾಸ್ ನುಡಿಸಿರಿ ಮೂಲಕ ಕನ್ನಡ ನಾಡು, ನುಡಿ, ಸಂಸ್ಕೃತಿ ಮತ್ತು ಸಾಹಿತ್ಯವನ್ನು ಪರಿಚಯಿಸುತ್ತಿದೆ. ಕನ್ನಡವನ್ನು ಆಧುನಿಕ ಜ್ಞಾನ ಮತ್ತು ಸಂವಹನದ ಭಾಷೆಯಾಗಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ವಿದ್ಯಾರ್ಥಿಗಳು ಡೊಳ್ಳು ಕುಣಿತ, ಪೂಜಾ ಕುಣಿತ ಪ್ರದರ್ಶಿಸಿದರು.
ಪ್ರಾಂಶುಪಾಲ ಡಾ. ಪೀಟರ್ ಫೆರ್ನಾಂಡಿಸ್, ಕೃಷಿ ವಿಜ್ಞಾನ ಕಾಲೇಜಿನ ಡೀನ್ ಡಾ. ವಾಸುದೇವನ್, ಕನ್ನಡ ಸಂಘದ ಸಂಯೋಜಕ ಗಣೇಶ್ ಎಂ.ಆರ್., ಸಹಸಂಯೋಜಕ ಡಾ. ಗುರುಶಾಂತ್ ವಗ್ಗರ್ ಉಪಸ್ಥಿತರಿದ್ದರು. ಶ್ರೀಲಕ್ಷ್ಮಿ ನಿರೂಪಿಸಿ, ಭಾಗ್ಯಶ್ರೀ ಸ್ವಾಗತಿಸಿದರು.

Post a Comment

0 Comments

Advertisement