ಪಡುಕೊಣಾಜೆ ಶಾಲಾ ಕಟ್ಟಡದ ಸಹಾಯಾರ್ಥ ನಾಟಕ ಪ್ರದರ್ಶನ
ಶಿಕ್ಷಣ ಸಂಸ್ಥೆಯ ಬಲವೃದ್ಧಿಗೆ ಶ್ರಮಿಸುವ ಕಾರ್ಯ ಶ್ಲಾಘನೀಯ: ಸುದರ್ಶನ್
ಮೂಡುಬಿದಿರೆ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಡುಕೊಣಾಜೆ ಇದರ ಶತಮಾನೋತ್ಸವ ಶಾಲಾ ಕಟ್ಟಡದ ಸಹಾಯಾರ್ಥವಾಗಿ ಮೂಡುಬಿದಿರೆಯ ಕನ್ನಡ ಭವನದಲ್ಲಿ ಅಕ್ಟೋಬರ್ 24ರಂದು ಚೈತನ್ಯ ಕಲಾವಿದರು ಬೈಲೂರು ಇವರ ಪ್ರಸಕ್ತ ವರ್ಷದ ನೂತನ ಹಾಸ್ಯಮಯ ತುಳು ನಾಟಕ 'ಊರು ಬೋಡು, ಪುದರ್ ಬೊರ್ಚಿ' ಪ್ರದರ್ಶನ ಗೊಂಡಿತು.
ಬಿಜೆಪಿ ದಕ ಜಿಲ್ಲಾ ಮಾಜಿ ಅಧ್ಯಕ್ಷ ಸುದರ್ಶನ ಎಂ. ದೀಪ ಬೆಳಗಿಸಿ ನಾಟಕ ಪ್ರದರ್ಶನದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಊರವರು ಮತ್ತು ಹಳೆ ವಿದ್ಯಾರ್ಥಿಗಳು ಸಂಘಟಿತರಾಗಿ ಶಿಕ್ಷಣ ಸಂಸ್ಥೆಯನ್ನು ಬಲವೃದ್ಧಿ ಗೊಳಿಸಲು ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು. ಯುವ ಸಮುದಾಯ ಒಗ್ಗೂಡಿದಾಗ ಶಿಕ್ಷಣ ವ್ಯವಸ್ಥೆಯಲ್ಲಿ ಅಮೂಲಾಗ್ರ ಕ್ರಾಂತಿಯನ್ನು ತರಲು ಸಾಧ್ಯವಿದೆ ಎಂದು ಹೇಳಿದರು.
ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ,ಪಂಚಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ರಂಜಿತ್ ಪೂಜಾರಿ ತೋಡಾರ್ ಮಾತನಾಡಿ ಶಾಲೆಯ ಅಭಿವೃದ್ಧಿಗೆ ಈಗಾಗಲೇ ಎರಡು ಕೊಠಡಿಗಳನ್ನು ಒದಗಿಸಲಾಗಿದ್ದು, ಹೆಚ್ಚುವರಿ ಕೊಠಡಿ ಹಾಗೂ ವ್ಯವಸ್ಥೆ ಕಲ್ಪಿಸಲು ಯೋಜನೆ ರೂಪಿಸುವುದಾಗಿ ತಿಳಿಸಿದರು.
ನ್ಯಾಯವಾದಿ ಶಾಂತಿಪ್ರಸಾದ್ ಹೆಗ್ಡೆ, ಹಾಗೂ ನಾಟಕದ ಕರ್ತೃ ಪ್ರಸನ್ನ ಶೆಟ್ಟಿ ಬೈಲೂರು ಮಾತನಾಡಿ ಶುಭ ಹಾರೈಸಿದರು. ಪಡುಕೋಣಾಜೆ ಮಾಣಿಕ್ಯ ರಾಜ್ ಆಳ್ವ, ಶಿರ್ತಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರವೀಣ್ ಕುಮಾರ್, ವಕೀಲರಾದ ನಾಗೇಶ್ ಶೆಟ್ಟಿ, ಸುರೇಶ್ ಕೆ ಪೂಜಾರಿ, ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಸನಿಲ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅರುಣ್ ಶೆಟ್ಟಿ, ಉದ್ಯಮಿ ವಿಶ್ವನಾಥ ಕೋಟ್ಯಾನ್ ಹನ್ನೇರ್, ಆರ್ ಆರ್ ಫ್ಯಾಷನ್ ಮಾಲಕ ರಾಜೇಶ್ ಎಂ ಕೋಟ್ಯಾನ್ ಹೌದಾಲ್, ಪಂಚರತ್ನ ಹೋಟೆಲ್ ಉದ್ಯಮಿ ವಿನಯ ಶೆಟ್ಟಿ ಪಡುಕೊಣಾಜೆ, ಮೂಡುಬಿದಿರೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನವೀನ್ ಸಾಲ್ಯಾನ್, ಜೋಗುಳ ಬೆಟ್ಟು ನಿತೇಶ್ ಹೆಗ್ಡೆ, ಶಿರ್ತಾಡಿ ಶ್ರೀ ಕ್ಷೇತ್ರ ಕಂದಿರು ದೇವಸ್ಥಾನದ ಆಡಳಿತ ಮುಖ್ಯಸ್ಥರಾದ ಸೋಮನಾಥ ಶಾಂತಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಮಾಜಿ ಸಚಿವ ಕೆ ಅಭಯಚಂದ್ರ ಜೈನ್ ನಾಟಕ ವೀಕ್ಷಿಸಿ ಶುಭ ಹಾರೈಸಿದರು. ಶಾಸಕ ಉಮಾನಾಥ ಎ ಕೋಟ್ಯಾನ್ ಅವರು ಎಂ ಆರ್ ಪಿ ಎಲ್ ನಿಧಿಯಿಂದ ಎರಡು ಕೊಠಡಿಗಳನ್ನು ಮಂಜೂರು ಮಾಡಿರುವುದನ್ನು ಸಭೆಗೆ ತಿಳಿಸಿ, ಮತ್ತೆರಡು ಕೊಠಡಿಗಳ ಮಂಜೂರಾತಿಗೆ ನೀಡಿರುವ ಭರವಸೆಯನ್ನು ವ್ಯಕ್ತಪಡಿಸಲಾಯಿತು.
ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಸಂತೋಷ್ ಕೋಟ್ಯಾನ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರೀಶ್ಚಂದ್ರ ಕೆ ಸಿ, ಎಸ್ ಡಿ ಎಂ ಸಿ ಅಧ್ಯಕ್ಷ ಸುಧಾಕರ ಹೆಗ್ಡೆ, ಹಿತೈಷಿ ರಾಘವ ಪಿ ಸುವರ್ಣ ಕೊಪ್ಪದೊಟ್ಟು, ಶಾಲಾ ಮುಖ್ಯ ಶಿಕ್ಷಕಿ ಶ್ರೀವಿದ್ಯಾ ಡಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ವಿವಿಧ ಸಮಿತಿಗಳ ಪದಾಧಿಕಾರಿಗಳು ನಾಟಕ ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು. ರಾಮ್ ಕುಮಾರ್ ಮಾರ್ನಾಡ್ ಕಾರ್ಯಕ್ರಮ ನಿರೂಪಿಸಿದರು.

0 Comments