ಬಲಿಪ ಪ್ರಸಾದ ಭಾಗವತ 50ರ ನೆನಪು :ಭಾಗವತ ರವಿಚಂದ್ರ ಕನ್ನಡಿಕಟ್ಟೆಯವರಿಗೆ 15ನೇ ಸನ್ಮಾನ

ಬಲಿಪ ಪ್ರಸಾದ ಭಾಗವತ 50ರ ನೆನಪು :
ಭಾಗವತ ರವಿಚಂದ್ರ ಕನ್ನಡಿಕಟ್ಟೆಯವರಿಗೆ 15ನೇ ಸನ್ಮಾನ

ಮೂಡುಬಿದಿರೆ: ಬಲಿಪ ಪ್ರಸಾದ ಭಾಗವತ 50ರ ನೆನಪು 'ಪಂಚಾಶತ್ ಸ್ಮರಣ್ ಪಂಚಾಶತ್ ಸಮ್ಮಾನ್' ಸರಣಿಯ 15ನೇ ಸನ್ಮಾನ ಕಾಯ೯ಕ್ರಮವು ಶುಕ್ರವಾರ ಮೂಡುಬಿದಿರೆ ಪೊನ್ನೆಚಾರಿ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವದ ವೇದಿಕೆಯಲ್ಲಿ ನಡೆಯಿತು. 

ಪೊನ್ನೆಚಾರಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಎಂ.ಪಿ. ಅಶೋಕ್ ಕಾಮತ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತೆಂಕುತಿಟ್ಟಿನ ಅಗ್ರಪಂಕ್ತಿಯ ಭಾಗವತರಾದ ಹನುಮಗಿರಿ ಮೇಳದ ಪ್ರಧಾನ ಭಾಗವತ ರವಿಚಂದ್ರ ಕನ್ನಡಿಕಟ್ಟೆಯವರಿಗೆ ಸರಣಿಯ 15ನೆಯ ಸನ್ಮಾನವನ್ನು ನೀಡಿ ಗೌರವಿಸಲಾಯಿತು. 

ಹಿರಿಯ ಉದ್ಯಮಿ ಕೆ. ಶ್ರೀಪತಿ ಭಟ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಅಗಲಿದ ಸಾಧಕರನ್ನು ಸ್ಮರಿಸಿಕೊಂಡು ಅವರ ಹೆಸರಿನಲ್ಲಿ ಅದೇ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕಲಾವಿದರನ್ನು ಗೌರವಿಸುವ ಈ ಸರಣಿ ಕಾರ್ಯಕ್ರಮ ಮಾದರಿಯಾಗಿದೆ ಎಂದರು. 

 
ಸರಣಿ ಕಾರ್ಯಕ್ರಮದ ಗೌರವ ಸಲಹೆಗಾರ ಅಳಿಯೂರು ರುಕ್ಕಯ್ಯ ಪೂಜಾರಿ ಅವರು ಅತಿಥಿಗಳನ್ನು ಗೌರವಿಸಿದರು. ಯಕ್ಷಗಾನ ಸಂಘಟಕ ಎಂ. ಶಾಂತರಾಮ ಕುಡ್ವರು ಬಲಿಪ ಪ್ರಸಾದ ಭಾಗವತರ ಸಂಸ್ಮರಣೆಗೈದರು. ಯಕ್ಷಗಾನ ಸಂಘಟಕ, ಕಲಾವಿದ ರವಿಪ್ರಸಾದ್ ಕೆ. ಶೆಟ್ಟಿಯವರು ಸನ್ಮಾನಿತ ರವಿಚಂದ್ರ ಕನ್ನಡಿಕಟ್ಟೆಯವರ ಸುದೀರ್ಘ ಕಲಾ ಸೇವೆಯನ್ನು ಕೊಂಡಾಡಿದರು. 

ಕನ್ನಡಿಕಟ್ಟೆಯವರ ಅರಂಭಿಕ ಗುರು ಅನಂತ ಪದ್ಮನಾಭ ಹೊಳ್ಳ, ವಾಸ್ತುತಜ್ಞ ರಾಘವೇಂದ್ರ ಭಂಡಾರ್ಕಾರ್, ವಿಶ್ವನಾಥ ನಾಯಕ್ ಕಲ್ಲಬೆಟ್ಟು ಉಪಸ್ಥಿತರಿದ್ದರು. ಲ. ಆಲ್ವಿನ್ ಮಿನೇಜಸ್ ಗಂಟಾಲ್ಕಟ್ಟೆ ಸನ್ಮಾನ ಪತ್ರ ವಾಚಿಸಿದರು. ಸಿರಿಪುರ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಡಾ. ರಾಮಕೃಷ್ಣ ಶಿರೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗರತ್ನ ಶಿರೂರು ನಿರೂಪಿಸಿದ ಕಾರ್ಯಕ್ರಮದಲ್ಲಿ ಸಂಘಟಕ ಕೃಷ್ಣಕುಮಾರ್ ಸ್ವಾಗತಿಸಿ ಕಾಯ೯ಕ್ರಮದ ಬಗ್ಗೆ ವಿವರಿಸಿದರು.

Post a Comment

0 Comments

Advertisement