ವಂದೇ ಮಾತರಂ ಘೋಷಿಸೋಣ ,ತ್ರಿವರ್ಣ ಧ್ವಜ ಹಾರಿಸೋಣ, ದೇಶಕ್ಕಾಗಿ ದುಡಿಯೋಣ, ಭಾರತವನ್ನು ಬೆಳಗಿಸೋಣ. ತಮಗೆಲ್ಲರಿಗೂ ಎಂಬತ್ತನೇ ಸ್ವಾತಂತ್ರೋತ್ಸವದ ಶುಭಾಶಯಗಳನ್ನು ಕೋರುತ್ತಾ ಇಂದು ತಮ್ಮೊಂದಿಗೆ ನನ್ನ ಮನದ ಭಾವನೆಯನ್ನು ಹಂಚಿಕೊಳ್ಳಲು ಇಷ್ಟಪಡುತ್ತೇನೆ.
ವಂದೇ ಮಾತರಂ ಘೋಷಿಸಿ ಆಯಿತು, ತ್ರಿವರ್ಣ ಧ್ವಜವನ್ನು ಹಾರಿಸಿಯು ಆಯಿತು, ದೇಶಕ್ಕಾಗಿ ದುಡಿಯುವುದು ಭಾರತವನ್ನು ಬೆಳಗಿಸುವುದು ಇನ್ನೂ ಬಾಕಿ ಇದೆ. ನಾವು ಬದುಕಿದರೆ ಯಾವ ರೀತಿ ಬದುಕಬೇಕು ಎಂಬುದರ ಬಗ್ಗೆ ಒಬ್ಬ ದಾರ್ಶನಿಕರು ಹೀಗೆ ಹೇಳಿದ್ದಾರೆ. ಹುಟ್ಟಿದರೆ ತಾಯಿ ಸಂತೋಷ ಪಡುವಂತಿರಬೇಕು, ಬೆಳೆದರೆ ತಂದೆ ಆನಂದಿಸುವಂತಿರಬೇಕು, ಬಾಳಿದರೆ ಸಮಾಜ ಸಂಭ್ರಮಿಸುವಂತಿರಬೇಕು, ಕೊನೆಗೆ ಒಂದು ದಿನ ಸತ್ತರೆ ನಿನ್ನನ್ನು ನೋಡಿ ಸ್ಮಶಾನ ಕೂಡ ಕಣ್ಣೀರಿಡಬೇಕು. ಹೌದು ಪ್ರಿಯರೆ, ಅಂತಹ ಬದುಕನ್ನು ನಾವು ಬದುಕಬೇಕು. ಯಾಕೆಂದರೆ ಅಂತಹ ಬದುಕನ್ನೇ ಆ ನಮ್ಮ ರಾಷ್ಟ್ರ ನಾಯಕರು ಲಕ್ಷಾಂತರ ಸ್ವಾತಂತ್ರ ಹೋರಾಟಗಾರರು ಬದುಕಿದ ಬದುಕು ಅದು. ಆದ್ದರಿಂದಲೇ ನಾವು ಅವರನ್ನು ನಾವು ಅಂದು ಇಂದು ಎಂದೆಂದೂ ಸ್ಮರಿಸುತ್ತೇವೆ. ಅವರು ಮಾಡಿದ ಆ ಬಲಿದಾನವನ್ನು ನಾವು ತಿಳಿಯುವ ಪ್ರಾಮಾಣಿಕ ಪ್ರಯತ್ನ ಮಾಡಿದರೆ ನಮ್ಮ ಕಣ್ಣಿನಲ್ಲಿ ಕಣ್ಣೀರ ಕೋಡಿಯೇ ಹರಿದೀತು.
ದಶಾಭಿಮಾನಿಗಳೇ,
ಇಂದು ನಾವು ನಮ್ಮ ದೇಶಕ್ಕೋಸ್ಕರ ನಮ್ಮ ರಕ್ತ ಅಥವಾ ನಮ್ಮ ಪ್ರಾಣ ನೀಡುವ ಅಗತ್ಯವಿಲ್ಲ ಅದನ್ನು ನಮ್ಮ ಹಿರಿಯರು ಈಗಾಗಲೇ ಕೊಟ್ಟಾಗಿದೆ,ನಮಗೆ ಸ್ವಾತಂತ್ರ್ಯ ಬಂದಾಗಿದೆ. ಹಾಗಾದರೆ ನಮ್ಮ ದೇಶಕ್ಕಾಗಿ ನಾವು ಮಾಡಲು ಏನು ಉಳಿದಿದೆ? ತುಂಬಾನೇ ಉಳಿದಿದೆ . ನಾವು ನಮ್ಮ ಮನೆಗಳಲ್ಲಿ ಗಾಜಿನ ಲೋಟವನ್ನು ಟೇಬಲ್ ಮೇಲೆ ಇಟ್ಟರೆ ವಜ್ರಗಳನ್ನು ಕಪಾಟುಗಳಲ್ಲಿ ಬೀಗ ಹಾಕಿ ಭದ್ರವಾಗಿರಿಸುತ್ತೇವೆ. ವಜ್ರದಂತೆ ಅಮೂಲ್ಯವಾದದು ನಮ್ಮ ಸ್ವಾತಂತ್ರ. ಅದನ್ನು ಜೋಪಾನವಾಗಿ ಕಾಪಾಡುವ ಜವಾಬ್ದಾರಿ ನನ್ನ ನಿಮ್ಮ ಮೇಲಿದೆ. ಒಮ್ಮೆ ಒಬ್ಬ ಯೋಧ ಯುದ್ಧ ಮುಗಿಸಿ ಕೆಲ ದಿನಗಳ ಪ್ರವಾಸಕ್ಕಾಗಿ ಹಿಮಾಲಯದ ಪರ್ವತದ ಕಡೆ ನಡೆದನಂತೆ. ಸಾಗುತ್ತಿದ್ದಂತೆ ಕತ್ತಲಾಯಿತು. ಹಿಂತಿರುಗಿ ಬರಲು ದಾರಿ ಕಾಣಿಸಲಿಲ್ಲ. ದೂರದಲ್ಲೊಂದು ಮಿಣಿ ಮಿಣಿ ದೀಪ ಕಂಡಿತು . ಹೋಗಿ ಬಾಗಿಲು ಬಡಿದಾಗ ವೃದ್ಧೆ ಒಬ್ಬರು ಬಾಗಿಲು ತೆರೆದರು. ಉಳಿದುಕೊಳ್ಳಲು ಜಾಗ ಹಾಗೆಯೇ ಆಹಾರವನ್ನು ನೀಡಿದರು. ಅಷ್ಟರಲ್ಲಿ ಆ ಯೋಧನ ಕಿವಿಗೆ ಸ್ವಾತಂತ್ರ್ಯ ಸ್ವಾತಂತ್ರ್ಯ ಎನ್ನುವ ಕೂಗು ಕೇಳಿಸಿತು. ಈ ಪರ್ವತ ಪ್ರದೇಶದಲ್ಲಿ ಸ್ವಾತಂತ್ರ್ಯ ಸ್ವಾತಂತ್ರ್ಯ ಎಂದು ಕೂಗುವವರು ಯಾರಿರಬಹುದು ಎಂದು ಹೊರಗೆ ಬಂದು ನೋಡಿದಾಗ ಪಂಜರದಲ್ಲೊಂದು ಗಿಳಿಯಿತ್ತು. ಅದು ಸ್ವಾತಂತ್ರ ಸ್ವಾತಂತ್ರ್ಯ ಅಂತ ಕೂಗುತ್ತಿತ್ತು. ಯೋಧರು ಆ ಗಿಳಿಯನ್ನು ಹೊರ ತೆಗೆದು ಸ್ವಚ್ಛಂದವಾಗಿ ಹಾರಾಡಲು ಬಿಟ್ಟುಬಿಟ್ಟರು. ಮರುದಿನ ಬೆಳಿಗ್ಗೆ ಎದ್ದಾಗ ಮತ್ತೆ ಅದೇ ಕೂಗು ಸ್ವಾತಂತ್ರ್ಯ ಸ್ವಾತಂತ್ರ್ಯ. ಹೊರಗೆ ಬಂದು ನೋಡಿದರೆ ಪಂಜರದ ಬಾಗಿಲು ತೆರೆದಿದೆ ಗಿಳಿಯು ಪುನಃ ಪಂಜರದೊಳಗೆ ಇದೆ. ಮತ್ತೆ ಅದೇ ಕೂಗನ್ನು ಅದು ಕೂಗುತ್ತಿದೆ. ಆಗ ಆ ಯೋಧನಿಗೆ ಒಂದು ವಿಷಯ ಮನದಟ್ಟಾಯಿತು. ನಾವು ಸ್ವಾತಂತ್ರ್ಯ ಸ್ವಾತಂತ್ರ್ಯ ಎಂದು ಬಡವಡಿಸಿದರೆ ಸಾಲದು. ಹೇಗೆ ಆ ಗಿಳಿಯು ಪಂಜರದಿಂದ ಸ್ವತಂತ್ರವಾಗಿ ಹೊರಬಂದು ಜೀವಿಸಬೇಕಾದರೆ ಅದು ಇತರ ಪಕ್ಷಿಗಳಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಬೇಕು ತನಗೆ ಒಂದು ಗೂಡನ್ನು ಕಟ್ಟಿಕೊಳ್ಳಬೇಕು ಹಾಗೆಯೇ ತನ್ನ ಆಹಾರವನ್ನು ತಾನೇ ಸಂಪಾದಿಸಬೇಕು. ಪಂಜರದೊಳಗೆ ಇದೆಲ್ಲಾ ಪುಕ್ಕಟೆಯಾಗಿ ದೊರೆಯುತ್ತಿತ್ತು. ಆದರೆ ಸ್ವಾತಂತ್ರ್ಯ ಇರಲಿಲ್ಲ. ಸ್ವಾತಂತ್ರ್ಯ ಎಂಬುದು ಅದೊಂದು ದೊಡ್ಡ ಜವಾಬ್ದಾರಿ. ಅದನ್ನು ನಾವು ಕಾಪಾಡಿ ಉಳಿಸಿಕೊಂಡು ಮುಂದಕ್ಕೆ ಕೊಂಡು ಹೋಗುವ ಜವಾಬ್ದಾರಿ ನನ್ನ- ನಿಮ್ಮ ಹೆಗಲ ಮೇಲಿದೆ. ಅಂದು ನಮಗೆ ರಾಜಕೀಯ ಸ್ವಾತಂತ್ರ್ಯವಿರಲಿಲ್ಲ, ಅದನ್ನು ನಮಗೆ ಆ ಮಹಾತ್ಮರು ನೀಡಿದರು. ಇಂದು ಭಾರತದ ಸಾವಿರಾರು ಜನರು ನಾನಾ ವಿಧದ ದಾಸ್ಯದಲ್ಲಿ ಇಂದಿಗೂ ಬಂದಿತರಾಗಿದ್ದಾರೆ. ಅಜ್ಞಾನ, ಸತ್ಯ, ಅನ್ಯಾಯ, ಅಸಮಾನತೆ, ಕೋಮುವಾದ, ನಿರುದ್ಯೋಗ, ಬಡತನ, ಭ್ರಷ್ಟಾಚಾರ ಮುಂತಾದ ಹತ್ತು ಹಲವು ಬಂಧನಗಳಲ್ಲಿ ಇಂದಿಗೂ ಭಾರತದ ಪ್ರಜೆಗಳು ಬಂದಿತರಾಗಿದ್ದಾರೆ. ವಿವೇಕಾನಂದರು ಒಂದು ಮಾತು ಹೇಳಿದ್ದಾರೆ:
ಬಡಿಯದ ಹೃದಯ ಹೃದಯವೇ ಅಲ್ಲ, ಕುದಿಯದ ರಕ್ತ ರಕ್ತವೇ ಅಲ್ಲ, ದೇಶಕ್ಕಾಗಿ ಬಾಳದ ಬದುಕು ಅದು ಬದುಕೇ ಅಲ್ಲ,ನರಕವದು.
ಹೌದು, ನಾವು ನಮ್ಮ ಸುಖಕ್ಕಾಗಿ ಬದುಕಲಿಕ್ಕೆ ಆಗದಿದ್ದರೂ ನಾಡಿನ ಒಳಿತಿಗಾಗಿ, ದೇಶದ ಒಳಿತಿಗಾಗಿ ಬದುಕಬೇಕು. ನನ್ನ ಭವಿಷ್ಯದ ಬಗ್ಗೆ ಒಂದು ವೇಳೆ ನಮ್ಮ ಹಿರಿಯರಲ್ಲಿ ನನ್ನನ್ನು ಇಷ್ಟು ಕಷ್ಟಪಟ್ಟು ಶಾಲೆಗೆ ಏಕೆ ಕಳುಹಿಸುತ್ತೀರಿ ಎಂದು ಕೇಳಿದರೆ ಉತ್ತರ ಏನಿರಬಹುದು? ಮಗ ನಾನು ಪಟ್ಟ ಕಷ್ಟ ನೀನು ಪಡಬಾರದು, ನನಗಿಂತ ಮಿಗಿಲಾದ ಜೀವನ ನಿನ್ನದಾಗಬೇಕು, ನೀನು ಚೆನ್ನಾಗಿರಬೇಕು ಎಂದು ಅವರು ಹೇಳುತ್ತಾರೆ. ಇದೇ ಪ್ರಶ್ನೆಯನ್ನ ನಾವು ಗಾಂಧೀಜಿಯವರಿಗೋ ಸುಭಾಷ್ ಚಂದ್ರ ಬೋಸರಿಗೋ ಅಥವಾ ಭಗತ್ ಸಿಂಗ್ ವರೆಗೂ ಅಥವಾ ಸಾವಿರಾರು ವೀರಾಧಿವೀರರಿಗೆ ಕೇಳಿದರೆ ಮಹಾತ್ಮರೆ ನೀವು ಯಾಕೆ ಭಾರತಕ್ಕೋಸ್ಕರ ಪ್ರಾಣ ನೀಡಿದಿರಿ ಎಂದು ಕೇಳಿದರೆ ಅವರು ಖಂಡಿತ ಹೀಗೆ ಹೇಳಬಹುದು.ಮಗು, ನಾನು ಕಂಡಿರುವ ದಾಸ್ಯ, ಗುಲಾಮಗಿರಿ, ಶೋಷಣೆ ನೀನು ಕಾಣಬಾರದು. ನೀನು ಭಾರತ ಮಾತೆಯ ಮಗನಾಗಿ, ನನಗಿಂತ ಮಿಗಿಲಾಗಿ ದೇಶ ಸೇವೆ ಮಾಡಬೇಕು. ಸುತ್ತಮುತ್ತಲಿರುವ ನಾನಾ ತರದ ಸಂಕೋಲೆಗಳನ್ನು, ಬಂಧನಗಳನ್ನು, ದಾಸ್ಯವನ್ನು ಹೋಗಲಾಡಿಸಬೇಕು. ಇದು ನೀನು ನಮ್ಮ ತ್ಯಾಗಕ್ಕೆ ನೀಡುವ ಕಾಣಿಕೆ.
ಬಂಕಿಮ್ ಚಂದ್ರ ಚಟರ್ಜಿ ಅವರು ಒಂದೇ ಮಾತರಂ ನಲ್ಲಿ ಹೀಗೆ ಅಂದಿದ್ದಾರೆ :
ಕೋಟಿ ಕೋಟಿ ಕಂಠ ಕಲಕಲ ನಿನಾದ ಕರಾಲೆ,
ಕೋಟಿ ಕೋಟಿ ಭುಜೈದ್ರತ ಖರ ಖರ ವಾಲೆ,
ಅಬ ಲಾ ಏನು ಮಾ ಏತೋಬಲೆ.
ಅಂದರೆ ತಾಯಿ ಭಾರತಾಂಬೆ ನಿನಗೆ ಕೋಟಿ ಕೋಟಿ ಮಕ್ಕಳಮ್ಮ, ಕೋಟಿ ಕೋಟಿ ಕಂಠಗಳಿಂದ ಸುಮಧುರವಾಗಿ ಹಾಡುವವಳು ನೀನು, ಕೋಟಿ ಕೋಟಿ ಭುಜಗಳಿಂದ ಶತ್ರು ನಾಶ ಮಾಡುವವಳು ನೀನು. ನಿನ್ನ ರಕ್ಷಣೆಗೆ ಕೋಟಿ ಕೋಟಿ ಮಕ್ಕಳು ನಾವು ನಿಂತಿದ್ದೇವೆ. ನೀನು ಹೇಗಮ್ಮ ಆ ಬಲೆಯಾಗುತ್ತೀಯಾ?
ಹೌದು, ಭಾರತಮಾತೆಯ ಆ ಕೋಟಿ ಕೋಟಿ ಮಕ್ಕಳು ನಾವು. ಭಾರತಮಾತೆಯು ಯಾವುದೇ ತರಹದ ದಾಸ್ಯಕ್ಕೆ ಒಳಗಾಗದ ಹಾಗೆ ಕಾಪಾಡಲು ಕಂಕಣಭದ್ಧರಾಗಿರೋಣ. ನಮ್ಮ ನಾಡಿಗಾಗಿ ನಮ್ಮ ಕೈಲಾದಷ್ಟು ಸೇವೆ ಮಾಡೋಣ. ಒಗ್ಗಟ್ಟಿನಿಂದ, ಪ್ರೀತಿಯಿಂದ, ಸೌಹಾರ್ದತೆಯಿಂದ ಜೀವಿಸಿ ಭಾರತ ಮಾತೆಯ ಏಕತೆಯನ್ನು, ಅಖಂಡತೆಯನ್ನು ಎತ್ತಿ ಹಿಡಿಯೋಣ. ಭಾರತದ ತ್ರಿವರ್ಣ ಧ್ವಜವು ಬಾನೆತ್ತರಕ್ಕೆ ಜಗದಗಲ ಯಾವಾಗಲೂ ಹಾರುತ್ತಿರಲಿ, ರಾರಾಜಿಸುತ್ತಿರಲಿ. ಭಾರತಮಾತೆಯ ನೆಚ್ಚಿನ ಮಕ್ಕಳಾಗಿ ಜೀವಿಸುವ ಭಾಗ್ಯ ನಮ್ಮೆಲ್ಲರಿಗೆ ದೊರಕಲಿ. ದೇಶ ರಕ್ಷಕರಾದ ಯೋಧರಿಗೆ ವಂದಿಸೋಣ, ರೈತರಿಗೆ ವಂದಿಸೋಣ.
ಡಾ.ಸಿಸಿಲಿಯ ಡಿಸೋಜ
ಕಿನ್ನಿಗೋಳಿ.
ಅಧ್ಯಾಪಕರು
ಹೋಲಿ ರೋಸರಿ ಪ್ರೌಢಶಾಲೆ ಮೂಡುಬಿದಿರೆ.

0 Comments