ಮೂಡುಬಿದಿರೆ: ಜಗತ್ತು ವೇಗವಾಗಿ ಬದಲಾಗುತ್ತಿರುವ ಹಿನ್ನೆಲೆಯಲ್ಲಿ ಯುವಜನರನ್ನು ಅಂಕ ಗಳಿಕೆಗೆ ಮಾತ್ರ ಸೀಮಿತಗೊಳಿಸದೆ ಕೌಶಲಾಭಿವೃದ್ಧಿ ಹೆಚ್ಚಿಸುವ ಚಟುವಟಿಕೆಗಳಲ್ಲಿ ತೊಡಗಿಸಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು.
ಅವರು ಸಪಳಿಗ ಯಾನೆ ಗಾಣಿಗರ ಸೇವಾ ಸಂಘದ 41ನೇ ವರ್ಷದ ವಾರ್ಷಿಕ ಮಹಾಸಭೆ, ಗಾಣಿಗರ ಮಹಿಳಾ ವೇದಿಕೆ ಹಾಗೂ ಯುವ ವೇದಿಕೆಯ ಸಹಯೋಗದಲ್ಲಿ ಪೊನ್ನೆಚ್ಚಾರಿನ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ವಿದ್ಯಾರ್ಥಿವೇತನ, ಪುಸ್ತಕ ವಿತರಣೆ, ಪ್ರತಿಭಾ ಪುರಸ್ಕಾರ, ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗಾಣಿಗ ಸಮುದಾಯದವರು ಹಿಂದೆ ಎಣ್ಣೆ ತೆಗೆಯುವ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದು, ನಂತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಸಮಾಜದಲ್ಲಿ ಗುರುತಿಸಿಕೊಂಡಿದ್ದಾರೆ ಎಂದು ಹೇಳಿದರು.
ಸನ್ಮಾನ, ಗೌರವ : ಸಂಘದ ಅಧ್ಯಕ್ಷ ರಾಜೇಶ್ ಬಂಗೇರ ಅಧ್ಯಕ್ಷತೆಯಲ್ಲಿ ಸಮಾಜದ ಹಿರಿಯರಾದ ಸದಾನಂದ ಸಪಳಿಗ ನ್ಯಾಯ ಬಸದಿ ಮತ್ತು ವೆಂಕಮ್ಮ ಪಡ್ಡಂದಡ್ಕ ಅವರನ್ನು ಸನ್ಮಾನಿಸಲಾಯಿತು. ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಗುರುರಾಜ್ ಮಲ್ಲಿಗೆಯಂಗಡಿ ಅವರನ್ನು ಗೌರವಿಸಲಾಯಿತು.
ದೇಣಿಗೆ ಹಸ್ತಾಂತರ : ಮುಖ್ಯ ಅತಿಥಿಯಾಗಿದ್ದ ಉದ್ಯಮಿ ಸಂದೀಪ್ ಪುತ್ತಿಗೆ ಸಂಘದ ಶೈಕ್ಷಣಿಕ ಚಟುವಟಿಕೆಗಳಿಗೆ 3 ಲಕ್ಷ ರೂ. ಹಾಗೂ ಸಂಘದ ಕಟ್ಟಡ ನಿರ್ಮಾಣಕ್ಕಾಗಿ ಸದಾನಂದ ಸಪಳಿಗ ಅವರು 1 ಲಕ್ಷ ರೂ. ದೇಣಿಗೆಯನ್ನು ಹಸ್ತಾಂತರಿಸಿದರು.
ಗಾಣಿಗ ಸಂಘ ಪುತ್ತೂರಿನ ಅಧ್ಯಕ್ಷ ಲಕ್ಷ್ಮೀ ಪ್ರಸಾದ್ ಬೆಟ್ಟ, ಗಾಣಿಗ ಯುವ ವೇದಿಕೆಯ ಅಧ್ಯಕ್ಷ ಸುಕೇಶ್ ಬಾರಾಡಿ, ಮಹಿಳಾ ವೇದಿಕೆಯ ಅಧ್ಯಕ್ಷೆ ಸುಜಯ ಬಂಗೇರ ಹಾಗೂ ವಿದ್ಯಾರ್ಥಿ ವೇದಿಕೆಯ ಅಧ್ಯಕ್ಷ ರಾಜ್ ಬಂಗೇರ ಉಪಸ್ಥಿತರಿದ್ದರು.
ದಿ. ಸಾಧು ಪುತ್ರನ್, ದಿ. ಜಾರಪ್ಪ ಮೇಸ್ತ್ರಿ, ದಿ. ಸುಂದರಿ ಜಾರಪ್ಪ ಹಾಗೂ ದಿ. ಬಾಬು ಸಪಳಿಗ ಅವರ ಸ್ಮರಣಾರ್ಥ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು.
ಮಹಿಳಾ ವೇದಿಕೆಯ ಕಾರ್ಯದರ್ಶಿ ಸಾರಿಕ ರಾಜೇಶ್ ಬಂಗೇರ ಲೆಕ್ಕಪತ್ರ ಮಂಡಿಸಿದರು. ಕಾರ್ಯದರ್ಶಿ ನಳಿನಿ ಲಕ್ಷ್ಮಣ್ ವರದಿ ಮಂಡಿಸಿದರು.ಜೊತೆ ಕಾರ್ಯದರ್ಶಿ ಭವಾನಿ ಶಂಕರ್ ಹಾಗೂ ಸಂಧ್ಯಾ ಸಂದೀಪ್ ಸನ್ಮಾನಿತರನ್ನು ಪರಿಚಯಿಸಿದರು. ದಿಯಾ ಬಂಗೇರ ವಿದ್ಯಾರ್ಥಿಗಳ ವಿವರ ನೀಡಿದರು. ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ನವೀನ್ ಪುತ್ರನ್ ಪುಸ್ತಕ ವಿತರಣೆಯ ವಿವರ ನೀಡಿದರು. ಸಾಂಸ್ಕೃತಿಕ ಕಾರ್ಯದರ್ಶಿ ರೂಪಾ ಪ್ರದೀಪ್ ಕಾರ್ಯಕ್ರಮ ನಿರೂಪಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಪ್ರತಾಪ್ ಬೆಟ್ಕೇರಿ ವಂದಿಸಿದರು.


0 Comments