ಪ್ಲಾಸ್ಟಿಕ್ ನಿಂದ ಪರಿಸರ ಕಲುಷಿತವಾಗದಂತೆ ನೂತನ ಪ್ರಯೋಗ
*ಬಾಟಲಿಯಲ್ಲಿ ತುಂಬುತ್ತೆ ಒಂದು ಗೋಣಿ ಚೀಲದಷ್ಟು ಪ್ಲಾಸ್ಟಿಕ್, ಗಾಡ೯ನ್ ಗೂ ಉಪಯೋಗ
ಮೂಡುಬಿದಿರೆ : ನಾವು ಬಳಸುವ ವಿವಿಧ ರೀತಿಯ ಪ್ಲಾಸ್ಟಿಕ್ ತ್ಯಾಜ್ಯಗಳು ಪರಿಸರವನ್ನು ಕಲುಷಿತಗೊಳಿಸುತ್ತಿವೆ ಎಂಬುದನ್ನು ಅರಿತಿರುವ ಮೂಡುಬಿದಿರೆಯ ಇಬ್ಬರು ಪರಿಸರ ಪ್ರೇಮಿಗಳು ತಮ್ಮ ಮನೆಗೆ ವಿವಿಧ ಮೂಲಗಳಿಂದ ಬರುವ ಪ್ಲಾಸ್ಟಿಕ್ ನ್ನು ಬಾಟಲಿಗಳಲ್ಲಿ ತುಂಬಿಸಿಡುವ ಮೂಲಕ ಸ್ವಚ್ಛತೆಗೆ ನೂತನ ಪ್ರಯೋಗವೊಂದನ್ನು ಮಾಡಿದ್ದಾರೆ.
ಪರಿಸರದ ಬಗ್ಗೆ ಅಪಾರ ಕಾಳಜಿಯನ್ನು ಹೊಂದಿರುವ ಮೂಡುಬಿದಿರೆಯ ಉಪ ವಲಯಾರಣ್ಯಾಧಿಕಾರಿ ಬಸಪ್ಪ ಹಲಗೇರ ಅವರ ಪುತ್ರ 11ರ ಹರೆಯದ ಯಸ್ವಿನ್ ಮತ್ತು ತೆಂಕಮಿಜಾರು ಗ್ರಾಮ ಪಂಚಾಯತ್ ನ ಅಧ್ಯಕ್ಷೆ ಶಾಲಿನಿ ಸಾಲ್ಯಾನ್ ಅವರ ಪುತ್ರ, ಕಾಲೇಜು ವಿದ್ಯಾಥಿ೯ ಕಾತಿ೯ಕ್ ಅವರು ಈ ವಿಶೇಷವಾದ ಪ್ರಯೋಗವನ್ನು ಮಾಡುತ್ತಿರುವವರು.
ನಾವು ಗೃಹ ಬಳಕೆಗೆ ತರುವ ಎಣ್ಣೆ ಕವರ್, ಹಾಲಿನ ಕವರ್, ದಿನಸಿ ಕವರ್, ಶ್ಯಾಂಪೂ, ಸಾಬೂನು, ಕುರುಕಲು ತಿಂಡಿಗಳ ಪ್ಯಾಸ್ಟಿಕ್ ಕವರ್ ಹೀಗೆ ನಾವು ದಿನವೊಂದಕ್ಕೆ ಹಲವು ಪ್ಲಾಸ್ಟಿಕ್ ಕವರ್ ಗಳನ್ನು ಒಳಗೊಂಡಿರುವ ವಸ್ತುಗಳನ್ನು ನಮ್ಮ ಮನೆಗೆ ತರುತ್ತೇವೆ. ಹೀಗೆ ಬಂದಿರುವ ಪ್ಲಾಸ್ಟಿಕ್ ಕವರ್ ಗಳನ್ನು ಕೆಲವರು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡದೆ ಪರಿಸರಕ್ಕೆ ಬಿಸಾಡಿ ಬಿಡುತ್ತಾರೆ. ಇದನ್ನು ದನ ಕರುಗಳು ತಿಂದು ವಿವಿಧ ರೋಗಗಳಿಗೆ ತುತ್ತಾಗುವುದಲ್ಲದೆ ಸಾವು ಸಂಭವಿಸುವುದುಂಟು ಇದಲ್ಲದೆ ಪರಿಸರವೂ ಕಲುಷಿತಗೊಳ್ಳುತ್ತದೆ.
ಆದ್ದರಿಂದ ಮನೆಯಲ್ಲಿ ಶೇಖರಣೆಯಾಗುವ
ಪ್ಲಾಸ್ಟಿಕ್ ಗಳನ್ನು ಸ್ವಚ್ಛಗೊಳಿಸಿ ಖಾಲಿಯಾಗಿರುವ ನೀರಿನ ಅಥವಾ ಜ್ಯೂಸ್ ಬಾಟಲ್ ಗಳ ಒಳಗಡೆ ತುಂಬಿಸಬೇಕು. ಹೀಗೆ ಒಂದು ಬಾಟಲ್ ಗಳಲ್ಲಿ ಒಂದು ಗೋಣಿ ಚೀಲದಲ್ಲಿ ತುಂಬುವಷ್ಟು ಪ್ಲಾಸ್ಟಿಕ್ ಗಳನ್ನು ತುಂಬಿಸಿಡಲು ಸಾಧ್ಯವಾಗುತ್ತದೆ. ಹೀಗೆ ತುಂಬಿಸಿಡುವುದರಿಂದ ಕಸದ ರಾಶಿ ಕಡಿಮೆಯಾಗುತ್ತದೆ. ಅಲ್ಲದೆ ತ್ಯಾಜ್ಯ ವಿಲೇವಾರಿ ಮಾಡುವ ವಾಹನಗಳಿಗೆ ನೀಡಲೂ ಸುಲಭವಾಗುತ್ತದೆ.
ಗಾಡ೯ನ್ ನ ಸೌಂದಯ೯ ಹೆಚ್ಚಿಸಲು ಬಾಟಲ್ ಗಳು ಸಹಕಾರಿ : ಪ್ಲಾಸ್ಟಿಕ್ ತುಂಬಿಸಿಟ್ಟಿರುವ ಬಾಟಲ್ ಗಳನ್ನು ಗಾಡ೯ನ್ ನಲ್ಲಿರುವ ಹೂವಿನ ಗಿಡಗಳ ಸುತ್ತ ಜೋಡಿಸಿಡಬೇಕು ಮತ್ತು ಕಂಪೌಂಡ್ ಗಳ ಮೇಲೆಯೂ ಜೋಡಿಸಿಡುವುದರಿಂದ ಸುಂದರವಾಗಿ ಕಾಣುತ್ತದೆ.
ಮುಂದುವರೆದ ಕೆಲವು ರಾಷ್ಟ್ರ ಗಳಲ್ಲಿ ಇಕೋ ಪ್ರಾಬ್ರಿಕ್ಸ್ ಗಳನ್ನು ಬಳಸಿ ಫನೀ೯ಚರ್, ಬಿಲ್ಡಿಂಗ್, ಗಾಡ೯ನ್ ಗಳಲ್ಲಿ ಬಳಸುತ್ತಾರೆ ಇದರಿಂದಾಗಿ ಪರಿಸರಕ್ಕೆ ಬೀಳುವ ಪ್ಲಾಸ್ಟಿಕ್ ಗಳಿಗೆ ಕಡಿವಾಣ ಬೀಳುತ್ತದೆ ಆದ್ದರಿಂದ ಇಂತಹ ಪ್ರಯೋಗಗಳನ್ನು ಪ್ರತಿಯೊಬ್ಬರು ತಮ್ಮ ಮನೆಗಳಲ್ಲಿ ಮಾಡಿದರೆ ಉತ್ತಮ.
ವರದಿ : ಪ್ರೇಮಶ್ರೀ ಕಲ್ಲಬೆಟ್ಟು
------------------------
ವಿದ್ಯಾಥಿ೯ಗಳಿಂದ ಜಾಗೃತಿ
ಕಾಲೇಜು ವಿದ್ಯಾಥಿ೯ಯಾಗಿರುವ ಕಾತಿ೯ಕ್ ಅವರು ತನ್ನ ಸಹಪಾಠಿಗಳಿಗೆ, ಆತ್ಮೀಯರಿಗೆಲ್ಲಾ ಈ ಪ್ರಯೋಗದ ಬಗ್ಗೆ ತಿಳಿಸಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಹಾಗೂ ಯಶ್ವಿನಿ ಕೂಡಾ ಸ್ವಚ್ಛ, ಪ್ಲಾಸ್ಟಿಕ್ ಮುಕ್ತ ಪರಿಸರ ನಮ್ಮದಾಗಬೇಕೆನ್ನುವ ನಿಟ್ಟಿನಲ್ಲಿ ಬಾಟಲ್ ಗಳಲ್ಲಿ ಪ್ಲಾಸ್ಟಿಕ್ ಗಳನ್ನು ತುಂಬಿಸಿಡುತ್ತಿದ್ದಾರೆ. ಹೀಗೆ ಈ ಇಬ್ಬರು ವಿದ್ಯಾಥಿ೯ಗಳು ಪರಿಸರದ ಬಗ್ಗೆ ನೈಜ ಕಾಳಜಿಯನ್ನು ತೋರಿಸುತ್ತಿದ್ದಾರೆ.
------------------------
0 Comments