ಮೂಡುಬಿದಿರೆ: ಪೇಟೆಯಲ್ಲಿರುವ ಹಲವು ವಸತಿ ಸಂಕೀರ್ಣಗಳಿಂದ ಮಲಿನ ನೀರು ಸಾರ್ವಜನಿಕ ರಸ್ತೆ ಸ್ಥಳಗಳಿಗೆ ಹರಿಯುತ್ತದೆ. ಇದರಿಂದ ಪರಿಸರ ಮಾಲಿನ್ಯವುಂಟಾಗುತ್ತಿದೆ. ಸೂಕ್ತ ಕ್ರಮ ಕೈಗೊಳ್ಳುವಂತೆ ಪುರಸಭಾ ಸದಸ್ಯೆ ಸ್ವಾತಿ ಪ್ರಭು ಒತ್ತಾಯಿಸಿದರು.
ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್ ಅಧ್ಯಕ್ಷತೆಯಲ್ಲಿ ಪುರಸಭಾ ಕಾರ್ಯಾಲಯದ ಸಭಾಭವನದಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಅಧ್ಯಕ್ಷರ ಗಮನಕ್ಕೆ ತಂದರು.
ಸ್ವರಾಜ್ಯ ಮೈದಾನದ ಮಾರ್ಕೆಟ್ ನಲ್ಲಿ ಗುಜರಿ ಅಂಗಡಿಯಿದ್ದು ಸುತ್ತಮುತ್ತಲಿನ ಪ್ರದೇಶದಲ್ಲಿ ಗುಜರಿ ವಸ್ತುಗಳನ್ನು ರಾಶಿ ಹಾಕಿರುವುದರಿಂದ ಪರಿಸರ ಮಾಲಿನ್ಯವಾಗಿದೆ. ರಾಶಿ ಹಾಕಿರುವ ಗುಜರಿ ವಸ್ತುಗಳನ್ನು ತೆರವುಗೊಳಿಸುವಂತೆ
ಸದಸ್ಯ ರಾಜೇಶ್ ನಾಯ್ಕ್ ತಿಳಿಸಿದರು.
ಮೂಡುಬಿದಿರೆಯ ಮುಖ್ಯರಸ್ತೆ, ಮಸೀದಿ ರಸ್ತೆ, ವಿಜಯನಗರ, ಮಾರ್ಕೆಟ್ ರಸ್ತೆ ಮತ್ತಿತರ ಕಡೆಗಳಲ್ಲಿ ಫುಟ್ಪಾತ್ವರೆಗೆ ಅಂಗಡಿ ವಿಸ್ತರಿಸಿ ವ್ಯಾಪಾರ ನಡೆಸುವುದರಿಂದ ಪಾದಾಚಾರಿಗಳಿಗೆ ಓಡಾಡಲು ಕಷ್ಟವಾಗುತ್ತಿದೆ. ಈ ಬಗ್ಗೆಯೂ ಕ್ರಮಕೈಗೊಳ್ಳಬೇಕೆಂದು ಸದಸ್ಯರೆಲ್ಲರೂ ಆಗ್ರಹಿಸಿದರು.
ಫುಟ್ಪಾತ್ ಮೇಲೆ ಅಂಗಡಿ ಸಾಮಾಗ್ರಿಗಳನ್ನು ಇಡದಂತೆ ಸಂಬಂಧ ಪಟ್ಟವರಿಗೆ ಎಚ್ಚರಿಕೆ ನೀಡಲಾಗುವುದು. ಮತ್ತೆಯೂ ಪುನರಾವರ್ತನೆಯಾದಲ್ಲಿ ಅಂತಹ ಸೊತ್ತುಗಳನ್ನು ಮುಟ್ಟಗೋಲು ಹಾಕಲಾಗುವುದು ಎಂದು ಇಂಜಿನಿಯರ್ ಪದ್ಮನಾಭ ಉತ್ತರಿಸಿದರು.
ಪುರಸಭಾ ವ್ಯಾಪ್ತಿಯಲ್ಲಿರುವ ಗೂಡಂಗಡಿಗಳು ಹಾಗೂ ಡಾಬಾಗಳಲ್ಲಿ ತಯಾರಾಗುವ ಆಹಾರಗಳು ಸುರಕ್ಷಿತವಾಗಿರುವುದರ ಬಗ್ಗೆ ಸಂಶಯವಿದೆ. ಇದನ್ನು ಪರಿಶೀಲನೆ ನಡೆಸುವುದು ಅಗತ್ಯ ಎಂದು ಪುರಸಭಾ ಸದಸ್ಯರು ಒತ್ತಾಯಿಸಿದರು. ಪುರಸಭೆಯಲ್ಲಿ ಆರೋಗ್ಯಾಧಿಕಾರಿ ಹುದ್ದೆ ಖಾಲಿಯಿದೆ. ಆದರೂ ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಅಧ್ಯಕ್ಷರು ತಿಳಿಸಿದರು. ಬಗ್ಗೆ ಪೊಲೀಸರ ಸಹಕಾರದೊಂದಿಗೆ ಸೂಕ್ತ ಕ್ರಮಕೈಗೊಳ್ಳುವಂತೆ ಕಂದಾಯ ನಿರೀಕ್ಷಕ ಅಶೋಕ್ ಅವರಿಗೆ ಸೂಚಿಸಿದರು. ತಾವು ತೆರವುಗೊಳಿಸಲು ಹೋದಾಗ ಪುರಸಭೆಯ ಸದಸ್ಯರು ಯಾರೂ ಅಂಗಡಿಯವರ ಪರವಾಗಿ ಮಾತನಾಡಬಾರದೆಂದು ಆರೋಗ್ಯ ನಿರೀಕ್ಷಕ ಅವರು ಹೇಳಿದರು.
ರಾಜಕಾಲುವೆಗಳು ಒತ್ತುವರಿಯಾಗುತ್ತಿದೆ. ಇದರಿಂದ ನೀರು ಸರಾಗವಾಗಿ ಹರಿದು ಹೋಗಲು ಅಡಚಣೆಯಾಗುತ್ತಿದೆ. ಇದರ ಬಗ್ಗೆ ತುರ್ತು ಗಮನ ಹರಿಸಬೇಕು ಎಂದು ಸದಸ್ಯೆ ಸೌಮ್ಯ ಶೆಟ್ಟಿ ಅವರು ಫ್ಲ್ಯಾಟ್ ಮತ್ತು ಹೊಟೇಲುಗಳ ಕೊಳಜೆ ನೀರನ್ನು ರಸ್ತೆಗಳಿಗೆ ಬಿಡುತ್ತಿದ್ದಾರೆ ಈ ಬಗ್ಗೆ ಹಲವು ಬಾರಿ ಸಭೆಯಲ್ಲಿ ತಿಳಿಸಲಾಗಿದೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ಸದಸ್ಯೆ ದಿವ್ಯಾ ಜಗದೀಶ್ ಸಭೆಯಲ್ಲಿ ಅಧ್ಯಕ್ಷರ ಗಮನಕ್ಕೆ ತಂದರು. ಪ್ರತೀ ವಸತಿ ಸಮುಚ್ಛಯಗಳ ನೀರನ್ನು ಅವರವರೇ ನಿರ್ವಹಣೆ ಮಾಡಬೇಕು. ಸಾರ್ವಜನಿಕ ಸ್ಥಳಕ್ಕೆ ಬಿಡಬಾರದು. ಈ ನಿಯಮವನ್ನು ಉಲ್ಲಂಘಿಸುವ ವಸತಿ ಸಮುಚ್ಛಯಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಡೋರ್ ನಂಬ್ರವನ್ನು ರದ್ದುಪಡಿಸಲಾಗುವುದು ಎಂದು ಅಧ್ಯಕ್ಷ ಪ್ರಸಾದ್ ಕುಮಾರ್ ಹೇಳಿದರು.
ಎಮ್ಮೆ ಮಾಂಸದ ಸ್ಟಾಲ್ ಗೆ ಪುರಸಭೆಯವರು ಅನುಮತಿ ನೀಡಬಾರದೆಂದು ಸಭೆಯಲ್ಲಿ ಸದಸ್ಯರು ಆಗ್ರಹಿಸಿದರು.
ಎಮ್ಮೆ ಮಾಂಸದ ಸ್ಟಾಲ್ ಗೆ ಪುರಸಭೆಯಿಂದ ಪರವಾನಿಗೆ ನೀಡುವುದಿಲ್ಲ, ಸ್ಟಾಲ್ ಮಾಡಲು ಅನುಮತಿ ಕೇಳಿರುವ ಅಶೋಕ್ ಅವರನ್ನು ಮುಂದಿನ ಸಭೆಗೆ ಕರೆದು ಈ ಬಗ್ಗೆ ಮಾತುಕತೆ ನಡೆಸಲಾಗುವುದೆಂದು ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ ತಿಳಿಸಿದರು.
ಪೇಟೆಯಲ್ಲಿರುವ ಖಾಸಗಿ ಸ್ಥಳಗಳು ನಿರ್ವಹಣೆಯಿಲ್ಲದೆ ಹುಲ್ಲು ಬೆಳೆಯುತ್ತದೆ. ಇಲ್ಲಿ ಹಾವುಗಳು ಓಡಾಡುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಈ ಸ್ಥಳಗಳ ನಿರ್ವಹಣೆ ಮಾಡುವಂತೆ ಸಂಬಂಪಟ್ಟವರಿಗೆ ಪುರಸಭೆ ನಿರ್ದೇಶನ ನೀಡಬೇಕು ಎಂದು ಸದಸ್ಯ ಪಿ.ಕೆ ಥೋಮಸ್ ಸಲಹೆ ನೀಡಿದರು.
ಪುರಸಭೆ ವ್ಯಾಪ್ತಿಯ ಪೇಪರ್ಮಿಲ್, ಅಲಂಗಾರು ಹಾಗೂ ವಿದ್ಯಾಗಿರಿ ಬಳಿ ಇರುವ ಸ್ವಾಗತಗೋಪುರಗಳು ಬಣ್ಣ ಕಳೆದುಕೊಂಡಿದೆ. ಅದರಲ್ಲಿರುವ ಮಾಹಿತಿಗಳನ್ನು ಸರಿಪಡಿಸಬೇಕು. ಪುರಸಭಾ ವ್ಯಾಪ್ತಿಯಲ್ಲಿರುವ ಬೀದಿ ದೀಪಗಳಿಗೆ ನಂಬರ್ ಹಾಕುವಂತೆ ಸದಸ್ಯೆ ಶ್ವೇತಾ ಪ್ರವೀಣ್ ಒತ್ತಾಯಿಸಿದರು.
ಮೂಡುಬಿದಿರೆ ಸ್ವಚ್ಛ ಪೇಟೆಯೆಂದು ಪುರಸಭೆ ಬಿಂಬಿಸುತ್ತಿದೆ. ಆದರೆ ಇಲ್ಲಿ ನಿರ್ವಹಣೆಯ ಲೋಪದ ಬಗ್ಗೆ ಸಾಮಾಜಿಕ ಜಾಲತಾಣ ಹಾಗೂ ಪತ್ರಿಕೆಗಳಲ್ಲಿ ವರದಿ ಬರುತ್ತಿದೆ ಎಂದು ಸುರೇಶ್ ಕೋಟ್ಯಾನ್ ಸಹಿತ ಕೆಲವು ಸದಸ್ಯರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷರು, ವಾರದ ಆರುದಿನವೂ ಪೌರಕಾರ್ಮಿಕರು ಸ್ವಚ್ಛತೆಯಲ್ಲಿ ತೊಡಗಿದ್ದಾರೆ. ಭಾನುವಾರ ರಜೆ ಇರುವ ಕಾರಣ ಆ ದಿನ ಮಾತ್ರ ವಿಲೇವಾರಿಯಾಗುತ್ತಿಲ್ಲ. ಆ ದಿನ ಸಂಗ್ರಹವಾಗುವ ಕಸದ ಚಿತ್ರಣವನ್ನೇ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬರು ಹರಿಯಬಿಟ್ಟಿದ್ದು ಇದರ ಹಿಂದೆ ಷಡ್ಯಂತ್ರ ಅಡಗಿದೆ ಎಂದರು.
ಸದಸ್ಯರಾದ ರೂಪಾ ಸಂತೋಷ್, ಕೊರಗಪ್ಪ, ಶಕುಂತಳಾ, ಜಯಶ್ರೀ, ಪುರಂದರ ದೇವಾಡಿಗ ಚರ್ಚೆಯಲ್ಲಿ ಪಾಲ್ಗೊಂಡರು.
ಉಪಾಧ್ಯಕ್ಷೆ ಸುಜಾತ ಶಶಿಧರ್, ಸ್ಥಾಯೀ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ ಉಪಸ್ಥಿತರಿದ್ದರು.
0 Comments