ಮುಸ್ಲಿಮರ ಆಚರಣೆಯಲ್ಲಿ ಒಂದಾಗಿರುವ ಬಕ್ರೀದ್ ಹಬ್ಬಕ್ಕೆ ಗೋಹತ್ಯೆ ಮಾಡಬೇಡಿ. ಗೋವಧೆ ಮಾಡದ ಮೂಲಕ ಈ ಬಾರಿಯ ಬಕ್ರೀದ್ ಹಬ್ಬವನ್ನು ಆಚರಿಸೋಣ ಎಂದು ಉಡುಪಿ ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷರಾದ ದಾವೂದ್ ಅಬುಬಕ್ಕರ್ ಕರೆ ಕೊಟ್ಟಿದ್ದಾರೆ.
ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ರಾಜ್ಯದ ಗೋಹತ್ಯೆ ನಿಷೇಧ ಕಾನೂನಿನಡಿ ಗೋವಧೆ ಮಾಡಿದರೆ ಕಠಿಣ ಶಿಕ್ಷೆ ಆಗುತ್ತದೆ. ಮಾತ್ರವಲ್ಲದೆ ಇದು ಎರಡು ಸಮುದಾಯದ ನಡುವಿನ ಘರ್ಷಣೆಗೆ ಕಾರಣ ಆಗಬಹುದು. ಹೀಗಾಗಿ ಗೋವಧೆ ಬೇಡ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿದ ಅವರು, "ಬಕ್ರೀದ್ ಹಬ್ಬವನ್ನು ಯಾವುದೇ ಕಾರಣಕ್ಕೂ ಗೋವಧೆ ಮಾಡದೆ ಆಚರಿಸೋಣ. ಮತ್ತೊಂದು ಧರ್ಮ ಅಥವಾ ಜೀವಿಗೆ ನೋವು ಕೊಟ್ಟು ಆಚರಿಸುವ ಯಾವುದೇ ಹಬ್ಬವನ್ನು ಇಸ್ಲಾಂ ಒಪ್ಪುವುದಿಲ್ಲ. ಹೀಗಾಗಿ ಗೋಹತ್ಯೆ ಮಾಡದೆ ಮತ್ತೊಂದು ಧರ್ಮವನ್ನು ಗೌರವಿಸಿ, ನಮ್ಮ ನೆಲದ ಕಾನೂನನ್ನು ಒಪ್ಪಿ ಹಬ್ಬ ಆಚರಿಸೋಣ" ಎಂದು ಹೇಳಿದ್ದಾರೆ.
0 Comments